ಬೆಂಗಳೂರು: ಡಾಕ್ಟರೇಟ್ ಕೊಟ್ಟಾಗಲೇ ಬೇಡ ಅಂದೋನು ನಾನು, ಇನ್ನು ರಸ್ತೆಗೆ ನನ್ನ ಹೆಸರಿಡಲು ಹೇಳ್ತೀನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರ ವಿವಾದಲ್ಲಿದೆ. ಈ ಬಗ್ಗೆ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ. ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದನ್ನು ಬಿಜೆಪಿ ಮತ್ತು ಕೆಲವು ಸಂಘಟನೆಗಳು ವಿರೋಧಿಸುತ್ತಿದೆ. ಆದರೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನು ಎಂದು ಅವರ ಆಪ್ತರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮೈಸೂರು ವಿಶ್ವವಿದ್ಯಾಲಯದವರು ಡಾಕ್ಟರೇಟ್ ನೀಡುತ್ತೇವೆ ಎಂದು ಮುಂದೆ ಬಂದಾಗ ಅದನ್ನೇ ವಿನಯದಿಂದ ಬೇಡ ಎಂದಿದ್ದೆ. ನಾನೇನೂ ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವನಲ್ಲ. ಕಳೆದ 45 ವರ್ಷಗಳಿಂದ ಅಧಿಕಾರದ ವಿವಿಧ ಸ್ಥಾನಗಳಲ್ಲಿ ಇದ್ದೇನೆ. ಯಾವತ್ತೂ ನನ್ನ ಹೆಸರನ್ನು ರಸ್ತೆಗೋ, ಕಟ್ಟಡಗಳಿಗೋ ಇಡಿ ಎಂದು ಯಾರ ಬಳಿ ಹೇಳಿಲ್ಲ, ಅದರ ಅಗತ್ಯವೂ ನನಗಿಲ್ಲ ಎಂದಿದ್ದಾರೆ.
ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮುಡಾ ಹಗರಣದಲ್ಲಿರುವ ನಿಮಗೆ ಆ ಅರ್ಹತೆಯೂ ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.