ಮೈಸೂರು: ಮೈಸೂರಿನ ಕೆಆರ್ ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡಲು ನಿರ್ಧರಿಸಿರುವುದು ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಡು ಟೀಕೆ ಮಾಡಿದ್ದಾರೆ.
ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ತಮ್ಮ ಹೆಸರನ್ನು ತಾವೇ ಇಟ್ಟುಕೊಳ್ಳುತ್ತಿರುವುದು ಯಾಕೆ ಎಂದು ಬಿವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಮೈಸೂರು ಸಂಸ್ಥಾನ ಕಟ್ಟಿ ಬೆಳೆಸಿದವರು ಮೈಸೂರಿನ ರಾಜ ಮಹಾರಾಜರು, ಅಂತಹ ಶ್ರೇಷ್ಠ ಮನೆತನದವರ ಹೆಸರಿರುವ ರಸ್ತೆಗೆ ಸಿದ್ದರಾಮಯ್ಯನವರು ತಮ್ಮದೇ ಹೆಸರಿಟ್ಟುಕೊಳ್ಳಲು ಮುಂದಾಗಿದ್ದಾರೆ. ಜನಪ್ರತಿನಿಧಿಗಳೇ ಇಲ್ಲದ ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಸಮಂಜಸ ತಾವೇ ಅಧಿಕಾರದಲ್ಲಿದ್ದು ತಮ್ಮದೇ ಹೆಸರನ್ನೇ ಪ್ರತಿಷ್ಠಾಪಿಸಿಕೊಳ್ಳಲು ಹೊರಟಿರುವ ಮುಖ್ಯಮಂತ್ರಿಗಳಿಗೆ ನೈತಿಕತೆ ಚುಚ್ಚುವುದಿಲ್ಲವೇ? ತುಘಲಕ್ ಆಡಳಿತ ಅನುಸರಿಸುವವರಲ್ಲಿ ಮಾತ್ರ ಇಂತಹ ನಡೆಯನ್ನು ಕಾಣಲು ಸಾಧ್ಯ ಎಂದು ವಿಜಯೇಂದ್ರ ಟ್ವೀಟ್ ಮಾಡಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಹೆಸರು ಈಗಾಗಲೇ ಮೈಸೂರಿನ ಅಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ಕೇಳಿಬಂದಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಖ್ಯಮಂತ್ರಿಗಳ ಹೆಸರನ್ನು ಒಂದು ರಸ್ತೆಗೆ ನಾಮಕರಣ ಮಾಡುವುದು ಸರಿಯಲ್ಲ ಎಂದು ಪರಿಸರ ಸಂರಕ್ಷಣಾ ಸಮಿತಿಯೂ ವಿರೋಧ ವ್ಯಕ್ತಪಡಿಸಿದೆ.