ನವದೆಹಲಿ: ಬಿಜೆಪಿಯಲ್ಲಿ ಭಿನ್ನಮತ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಬಿವೈ ವಿಜಯೇಂದ್ರ ಮತ್ತೆ ದೆಹಲಿಗೆ ತೆರಳಿ ಯತ್ನಾಳ್ ಟೀಂ ವಿರುದ್ಧ ದೂರು ನೀಡಲು ಮುಂದಾಗಿದೆ.
ಸದನದಲ್ಲಿ ಇಬ್ಬರೂ ನಾಯಕರು ಪರಸ್ಪರ ಮುಖಾಮುಖಿಯಾಗಿದ್ದರು. ಬೆಳಗಾವಿ ಅಧಿವೇಶನದಲ್ಲಿ ಅಕ್ಕಪಕ್ಕವೇ ಕುಳಿತಿದ್ದ ವಿಜಯೇಂದ್ರ, ಯತ್ನಾಳ್ ಪರಿಸ್ಪರ ಕೈ ಮುಗಿದು ನಮಸ್ಕಾರ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಕಾಮೆಂಟ್ ಮಾಡಿದ್ದ ಯತ್ನಾಳ್ ಎದುರಿಗೆ ಕೈ ಮುಗಿಯುತ್ತಾರೆ, ಒಳಗೊಳಗೆ ಏನಿದೆಯೋ ಯಾರಿಗೆ ಗೊತ್ತು ಎಂದು ಟಾಂಗ್ ಕೊಟ್ಟಿದ್ದರು.
ಇದೀಗ ದಾವಣಗೆರೆಯಲ್ಲಿ ವಿಜಯೇಂದ್ರ ಬಣ ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ ಪ್ರತಿಯಾಗಿ ಯತ್ನಾಳ್ ಬಣ ಕೂಡಾ ಸಭೆ ನಡೆಸಲು ಮುಂದಾಗಿರುವುದು ಮತ್ತೆ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಬಗ್ಗೆ ಹೈಕಮಾಂಡ್ ಗೆ ವರದಿ ಒಪ್ಪಿಸಲು ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಮೊನ್ನೆಯಷ್ಟೇ ಯತ್ನಾಳ್ ಗೆ ಶಿಸ್ತು ಸಮಿತಿ ನೋಟಿಸ್ ನೀಡಿ ದೆಹಲಿಗೆ ಕರೆಸಿಕೊಂಡು ಬುದ್ಧಿ ಹೇಳಿತ್ತು. ಹಾಗಿದ್ದರೂ ಯತ್ನಾಳ್ ಆಂಡ್ ಟೀಂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರುವುದನ್ನು ಬಿಟ್ಟಿರಲಿಲ್ಲ. ಈಗ ಮತ್ತೆ ವಿಜಯೇಂದ್ರ ದೆಹಲಿಗೆ ದೌಡಾಯಿಸಿದ್ದು ಈ ಬಾರಿ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ತೀರ್ಮಾನಕ್ಕೆ ಬರಲಿದೆ ನೋಡಬೇಕಿದೆ.