Select Your Language

Notifications

webdunia
webdunia
webdunia
webdunia

ಕೆಎಸ್ಡಿಎಲ್ ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ

Siddaramaiah

Krishnaveni K

ಬೆಂಗಳೂರು , ಬುಧವಾರ, 18 ಡಿಸೆಂಬರ್ 2024 (10:15 IST)
ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ (ಕೆಎಸ್ಡಿಎಲ್) ಕಾರ್ಖಾನೆಯು 2023-24ನೇ ಸಾಲಿನಲ್ಲಿ ಮಾಡಿರುವ 362.07 ಕೋಟಿ ರೂಪಾಯಿ ಲಾಭದ ಪೈಕಿ 108.62 ಕೋಟಿ ರೂಪಾಯಿಗಳ ಲಾಂಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಮಂಗಳವಾರ ಇಲ್ಲಿ  ಹಸ್ತಾಂತರಿಸಿದರು.
 
ವಿಧಾನಸಭೆ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಚೆಕ್ ನೀಡಲಾಯಿತು.
 
ಇದಲ್ಲದೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ಐದು ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು.
 
ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ ಲಾಭಾಂಶದ ಚೆಕ್ ನೀಡಿರುವುದು ಇದೇ ಮೊದಲು.
 
ನಂತರ ಮಾತನಾಡಿದ ಮುಖ್ಯಮಂತ್ರಿಯವರು, 'ಸಾರ್ವಜನಿಕ ಉದ್ದಿಮೆಗಳು ಲಾಭದಾಯಕ ವಹಿವಾಟು ನಡೆಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಐದು ವರ್ಷಗಳ ಹಿಂದೆ 15.91 ಕೋಟಿ ರೂಪಾಯಿ ಲಾಭಾಂಶ ಕೊಟ್ಟಿದ್ದ ಈ ಉದ್ದಿಮೆಯು ಈ ವರ್ಷ 108 ಕೋಟಿ ರೂ.ಗಳಿಗೂ ಹೆಚ್ಚಿನ ಡಿವಿಡೆಂಡ್ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
ಸಚಿವ ಎಂ ಬಿ ಪಾಟೀಲ ಮಾತನಾಡಿ, 'ಈಗಿನ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೆಎಸ್ಡಿಎಲ್ ಕಾರ್ಖಾನೆಯು ಉನ್ನತಿ ಕಾಣುತ್ತಿದೆ. ಈ ಲಾಭವನ್ನು ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹೊಸಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ' ಎಂದರು.
 
ಸಾರ್ವಜನಿಕ ಉದ್ದಿಮೆಗಳು ತಮ್ಮ ಲಾಭಾಂಶದಲ್ಲಿ ಶೇ.30ರಷ್ಟನ್ನು ಸರಕಾರಕ್ಕೆ ಕೊಡಬೇಕಾದ್ದು ನಿಯಮವಾಗಿದೆ. ಇದಕ್ಕೆ ತಕ್ಕಂತೆ ಈ ಲಾಭಾಂಶವನ್ನು ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷ ನಾಡಗೌಡ ವಿವರಿಸಿದರು.
 
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ.ಪ್ರಶಾಂತ್, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾದ ಕೆ.ಎಲ್.ರವೀಶ, ಗಂಗಪ್ಪ ಅವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ಆಧಾರಿತ ಅಲ್ಲ ಆರ್ಥಿಕತೆ ಆಧಾರದಲ್ಲಿ ಮೀಸಲಾತಿ ಬೇಕು ಎಂದ ದೇವೇಗೌಡರು: ನೀವೇನಂತೀರಿ