ಭಾರತೀಯ ಭೌತಶಾಸ್ತ್ರ ಶಿಕ್ಷಕರ ಒಕ್ಕೂಟ ಆಯೋಜಿಸುವ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ NSEಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಅಣು ಇಂಧನ ಇಲಾಖೆಯ ನ್ಯಾಷನಲ್ ಸ್ಟೀರಿಂಗ್ ಕಮಿಟಿಯ ಮೇಲುಸ್ತುವಾರಿಯಲ್ಲಿ ನಡೆಯುವ NSE, ಅಂತಾರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲು ಭಾರತದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರತಿಷ್ಠಿತ ಪರೀಕ್ಷೆಯಾಗಿದೆ. ಆದರೆ ಎನ್.ಎಸ್.ಇ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಖಗೋಳ ಶಾಸ್ತ್ರ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲ. ಆದ್ದರಿಂದ ಈ ಪರೀಕ್ಷೆಯಲ್ಲಿ ಹೆಚ್ಚು ಕನ್ನಡ ಮಕ್ಕಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ನಡೆಸಬೇಕು. ಇಂತಹ ಅವಕಾಶ ನೀಡಿದರೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಸಹಾಯವಾಗುತ್ತದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.