Publish Date: Wed, 27 Mar 2024 (19:25 IST)
Updated Date: Wed, 27 Mar 2024 (19:28 IST)
ಬೆಳಗಾವಿ: ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡಿದರೆ ದೊಡ್ಡ ನಾಯಕರಾಗುತ್ತೇವೆ ಎನ್ನುವ ಭ್ರಮೆ ಸಿದ್ದರಾಮಯ್ಯ ಅವರಿಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಮುಖ್ಯಮಂತ್ರಿಯಾಗಿ ಅವರೇ ಯೋಚಿಸಬೇಕು ಎಂದರು.
ಈಚೆಗೆ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಮಾತಿಗೆ ನಗಬೇಕೋ, ಅಳಬೇಕೋ ಗೊತ್ತಾಗುವುದಿಲ್ಲ. ಮೋದಿ ಬಗ್ಗೆ ಹಗುರವಾಗಿ ಮಾತಾಡಿದರೆ ದೊಡ್ಡವರಾಗುತ್ತೇವೆ ಎನ್ನುವ ಭಾವನೆ ಇದ್ದರೆ ಅದು ಖಂಡಿತ ಸಾಧ್ಯವಿಲ್ಲ. ಇಂತಹ ಮಾತು ಕಡಿಮೆ ಮಾಡಿ, ನಿಮ್ಮ ಸಿ.ಎಂ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಿ ಎಂದರು.
ಮೋದಿ ಹೆಸರು ಹೇಳಿ ಮತ ಕೇಳಿದರೆ ಕಪಾಳಮೋಕ್ಷ ಮಾಡಿ' ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವರಾಜ್ ತಂಗಡಗಿಗೆ ಇದು ಶೋಭೆ ತರುವುದಿಲ್ಲ. ಇದು ಅತಿರೇಕದ ಪರಮಾವಧಿ. ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಆ ಪಕ್ಷವೇ ಕ್ರಮ ಕೈಗೊಳ್ಳಬೇಕು ಎಂದರು.