Publish Date: Mon, 25 Mar 2024 (09:50 IST)
Updated Date: Mon, 25 Mar 2024 (10:02 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎನ್ನುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಿವಾದ ಸೃಷ್ಟಿಸಿದ್ದಾರೆ.
ಕೊಪ್ಪಳದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ತಂಗಡಗಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಮೋದಿ ಎಂದು ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದಿದ್ದಾರೆ. ಅವರ ಈ ಹೇಳಿಕೆ ವೈರಲ್ ಆಗಿದೆ.
ಮೋದಿ ಸರ್ಕಾರ ವರ್ಷಕ್ಕೆ ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಕೊನೆಗೆ ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಿದ್ದಾರೆ. ಹತ್ತು ವರ್ಷದಲ್ಲಿ 20 ಕೋಟಿ ಯುವಕರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಮೋದಿ ಸರ್ಕಾರದಿಂದ ಅದು ಸಾಧ್ಯವಾಗಿಲ್ಲ. ನೀಡಿದ ಭರವಸೆ ಈಡೇರಿಸದ ಕಾರಣ ಇನ್ನು, ವಿದ್ಯಾರ್ಥಿಗಳು, ಯುವಕರು ಮೋದಿ ಮೋದಿ ಎಂದು ಕೂಗಿದರೆ ಅವರ ಕಪಾಳಕ್ಕೆ ಹೊಡೆಯಬೇಕು ಎಂದಿದ್ದಾರೆ.
ಮತ್ತೊಮ್ಮೆ ಲೋಕಸಭೆ ಚುನಾವಣೆ ಬಂದಿದೆ. ಬಿಜೆಪಿಯವರು ಮತ್ತೆ ಸುಳ್ಳು ಹೇಳಿಕೊಂಡು ಮತ ಕೇಳಲು ಬರುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಘೋಷಿಸಿದ್ದೆವು. ಅದನ್ನು ಪೂರೈಸಿ ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ.