Select Your Language

Notifications

webdunia
webdunia
webdunia
webdunia

ಷೇರು ವಹಿವಾಟಿನ ಸ್ಟಾರ್ಟ್‌ಅಪ್‌ ಹೆವೆನ್‌ಸ್ಪೈರ್‌ನ ಯಶೋಗಾಥೆ

ಷೇರು ವಹಿವಾಟಿನ ಸ್ಟಾರ್ಟ್‌ಅಪ್‌ ಹೆವೆನ್‌ಸ್ಪೈರ್‌ನ ಯಶೋಗಾಥೆ
bangalore , ಮಂಗಳವಾರ, 6 ಜುಲೈ 2021 (14:18 IST)
ಇಪ್ಪತ್ತರ ಆಚೀಚಿನ ವಯಸ್ಸಿನವರು ಉತ್ತಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರೆ, ಯುವಕರಿಬ್ಬರು ಉಳಿದವರಿಗಿಂತ ಭಿನ್ನವಾಗಿ ಆಲೋಚಿಸಿ ಷೇರುಪೇಟೆಯ ವಹಿವಾಟಿನಿಂದಲೇ ಹಣ ಗಳಿಸಲು, ಇತರರಿಗೂ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿರುವ ಉದ್ದೇಶದಿಂದ ಹೆವೆನ್‌ಸ್ಪೈರ್‌ (Havenspire)ನವೋದ್ಯಮ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಕುತೂಹಲ ಮೂಡಿಸುತ್ತದೆ.
ವಿಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಓದುತ್ತಿರುವಾಗಲೇ ಷೇರುಪೇಟೆಯ ವಹಿವಾಟಿನ ಆಸಕ್ತಿ ಹೊಂದಿದ್ದ ಸಮಾನ ಮನಸ್ಕ ಗೆಳೆಯರಿಬ್ಬರು ಸೇರಿಕೊಂಡು ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಷೇರುಪೇಟೆಯ ಬಗ್ಗೆ ಆನ್‌ಲೈನ್‌ ತರಬೇತಿ (e-learning ) ನೀಡುವ ಅತಿದೊಡ್ಡ ನವೋದ್ಯಮ ಇದಾಗಿದೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಆತಂಕ ದೂರ ಮಾಡಿ, ಅವರಿಗೆ ಬಂಡವಾಳ ಮಾರುಕಟ್ಟೆಯ ವಹಿವಾಟಿನ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಟ್ಟು, ಷೇರು ವಹಿವಾಟು ನಡೆಸಲು ಹೆವೆನ್‌ಸ್ಪೈರ್‌ ಆನ್‌ಲೈನ್‌ನಲ್ಲಿಯೇ ತರಬೇತಿ ನೀಡುತ್ತಿದೆ.
ಕಾಲೇಜ್‌ನಲ್ಲಿ ಓದುವ ಹದಿಹರೆಯವದರಲ್ಲಿನ ಬಹುತೇಕರು ತಮ್ಮ ಪಾಕೆಟ್‌ ಮನಿ ಅಥವಾ ದೂರದ ಊರಿನಿಂದ ತಮ್ಮ ದಿನನಿತ್ಯದ ಖರ್ಚು–ವೆಚ್ಚಗಳಿಗಾಗಿ ಪಾಲಕರು ಕಳಿಸುವ ಹಣವನ್ನು ತಿಂಗಳು ಪೂರ್ಣವಾಗುವ ಮೊದಲೇ ಖಾಲಿ ಮಾಡಿ ಸ್ನೇಹಿತರಲ್ಲಿ ಸಾಲ – ಸೋಲ ಮಾಡುವುದು  ಸಾಮಾನ್ಯ ಸಂಗತಿಯಾಗಿರುತ್ತದೆ. ಇವರ ಮಧ್ಯೆ, ತಮ್ಮ ಬಳಿ ಇರುವ ಹಣದಲ್ಲಿ ಅಷ್ಟಿಷ್ಟು ಉಳಿಸುವ ಪ್ರವೃತ್ತಿ ರೂಢಿಸಿಕೊಂಡವರ ಸಂಖ್ಯೆ ತುಂಬ ಕಡಿಮೆ. ತಿಂಗಳ ಹಣದಲ್ಲಿಯೇ ಬಹುಪಾಲನ್ನು ಉಳಿಸಿ ಅದನ್ನು ವೃದ್ಧಿಸುವ ಕನಸು ಕಾಣುವವರ ಸಂಖ್ಯೆ ಅತಿ ವಿರಳ. ಅಂತಹ ವಿರಳ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುತ್ತಿದ್ದ ರಿತ್ವಿಕ್‌ ವಿಪಿನ್‌ (23) ಅವರು ರೂ 7,000ಗಳ  ‘ಪಾಕೆಟ್‌ ಮನಿ‘ಯಲ್ಲಿ ಬಹುಪಾಲನ್ನು ಉಳಿಸಿ ಷೇರು ವಹಿವಾಟಿನಲ್ಲಿ ತೊಡಗಿಸಿ ಎಂಜಿನಿಯರಿಂಗ್‌ ಓದುವಾಗಲೇ ಹಣ ಗಳಿಕೆಯ ಮಾರ್ಗಗಳನ್ನು ಕಂಡುಕೊಂಡಿದ್ದರು. ಕಾಲೇಜ್‌ ಓದುವ ಹಂತದಲ್ಲಿ ಬಹುತೇಕರು ಆಕರ್ಷಕ ಸಂಬಳದ ಉದ್ಯೋಗ ಗಿಟ್ಟಿಸಲು ತಮ್ಮೆಲ್ಲ ಶ್ರಮ ಪಣಕ್ಕೆ ಒಡ್ಡಿ ಓದುತ್ತ, ಪರೀಕ್ಷೆ ಬರೆಯುತ್ತಿದ್ದರೆ ರಿತ್ವಿಕ್‌, ಓದಿನ ಜತೆಗೆಯೇ ಷೇರು ಮಾರುಕಟ್ಟೆಯ ಗೋಜಲುಗಳನ್ನು ಬಿಡಿಸುವ ಬಗ್ಗೆ ತಲೆ ಬಿಸಿ ಮಾಡಿಕೊಂಡು ಹಣ ಗಳಿಕೆಯ ಮಾರ್ಗೋಪಾಯಗಳ ಹುಡುಕಾಟದಲ್ಲಿದ್ದರು. ಈ ಮೂಲಕ ತಮ್ಮದು ಇತರರಿಗಿಂತ ಭಿನ್ನ ವ್ಯಕ್ತಿತ್ವ ಎನ್ನುವುದನ್ನು ಸಾಬೀತುಪಡಿಸಿದ್ದರು. ಕೂಡಿಟ್ಟ ಹಣದಿಂದ 6 ತಿಂಗಳಲ್ಲಿ ರೂ 7 ಲಕ್ಷ ಗಳಿಸಿದ್ದ ಇವರು ಒಂದೇ ದಿನ ರೂ 1.20 ಲಕ್ಷ ಕಳೆದುಕೊಂಡ ನಿದರ್ಶನವೂ ಇದೆ.
ಷೇರುಪೇಟೆಯಲ್ಲಿ ಕಳೆದುಕೊಂಡ ಹಣವನ್ನು ಅಲ್ಲಿಯೇ ಮರಳಿ ಗಳಿಸಬೇಕೆಂಬ ಹಟದಿಂದ ಹಾಸ್ಟೆಲ್‌ನಿಂದ ಹೊರಬಂದು ಬಾಡಿಗೆ ಮನೆಯಲ್ಲಿದ್ದುಕೊಂಡು ಷೇರುವಹಿವಾಟಿಗೆ ತಮ್ಮೆಲ್ಲ ಗಮನ ಕೇಂದ್ರಿಕರಿಸಿದ್ದರು. ಅವರ ಸಹಪಾಠಿ ಆಕಾಶ್‌ ಜಯನ್‌ (23) ಕೂಡ ಇವರಂತೆಯೇ ಷೇರುಪೇಟೆಯ ವಹಿವಾಟಿನ ಬಗ್ಗೆ ಕುತೂಹಲ ಹೊಂದಿದ್ದರು. ರಿತ್ವಿಕ್‌ನ ಹಂಬಲಕ್ಕೆ ಇವರೂ ಕೈಜೋಡಿಸಿದರು. ಇವರಿಬ್ಬರ ಆಸಕ್ತಿ, ಕುತೂಹಲ, ಪರಿಶ್ರಮ, ಹಣಕಾಸಿನ ಶಿಸ್ತು, ಹೊಸ ಉದ್ದಿಮೆ ಆರಂಭಿಸುವ ತುಡಿತದ ಫಲವಾಗಿ 2019ರ ಡಿಸೆಂಬರ್ 13ರಂದು ಈ ನವೋದ್ಯಮ ಹೆವೆನ್‌ಸ್ಪೈರ್‌ (Havenspire) ಅಸ್ತಿತ್ವಕ್ಕೆ ಬಂದಿತು. ಷೇರುಪೇಟೆಯ ವಹಿವಾಟಿನ ಬಗ್ಗೆ ಆನ್‌ಲೈನ್‌ ತರಬೇತಿ ನೀಡುವ (e-learning) ದೇಶದ ಮೊದಲ ನವೋದ್ಯಮ ಇದಾಗಿರುವುದು ಇದರ ಹೆಗ್ಗಳಿಕೆಯಾಗಿದೆ.
ಷೇರು ಪೇಟೆಯಿಂದ ಆಕರ್ಷಿತರಾಗಿದ್ದ ಇವರು ತಮ್ಮ 18ನೇ ವಯಸ್ಸಿನಲ್ಲಿಯೇ ಷೇರುಗಳ ಖರೀದಿ – ಮಾರಾಟದಿಂದ ಕೈತುಂಬ ಹಣ ಗಳಿಸಬಹುದು ಎನ್ನುವುದನ್ನು ಮನಗಂಡಿದ್ದರು. ಪಾಕೆಟ್‌ ಮನಿಯಿಂದಲೇ ಷೇರುವಹಿವಾಟು ನಡೆಸುತ್ತ, ಹಣ ಗಳಿಸುತ್ತ, ಬಂಡವಾಳ ಪೇಟೆಯಿಂದ ಆಕರ್ಷಣೆಯಿಂದ ಹೊರಬರಲಾಗದೆ ಅಲ್ಲಿಯೇ ಬದುಕು ಕಟ್ಟಿಕೊಳ್ಳುವ, ಇತರರ ಬದುಕನ್ನೂ ಹಸನುಗೊಳಿಸುವ ಉದ್ದೇಶದ ನವೋದ್ಯಮವನ್ನು ಕಿರಿ ವಯಸ್ಸಿನಲ್ಲಿಯೇ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಆನ್‌ಲೈನ್‌ ತರಬೇತಿ ನೀಡುವ ನವೋದ್ಯಮವಾಗಿ ಹೆವೆನ್‌ಸ್ಪೈರ್‌ ಗಮನ ಸೆಳೆಯುತ್ತಿದೆ.
ಎಂಜಿನಿಯರಿಂಗ್ ಓದು ಮತ್ತು ಷೇರುವಹಿವಾಟಿನ ನಡುವೆ ಸಮತೋಲನ ಸಾಧಿಸುತ್ತಲೇ ಇವರಿಬ್ಬರೂ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದರು. ಕಾಲೇಜ್‌ನಲ್ಲಿನ ಕಲಿಕೆ ಕೊನೆಗೊಳ್ಳುತ್ತಿದ್ದಂತೆ ಕುಟುಂಬ ಸದಸ್ಯರ ಒತ್ತಾಯಕ್ಕೆ ಮಣಿದು ರಿತ್ವಿಕ್‌ ಅವರು ಕೆಪಿಎಂಜಿಯಲ್ಲಿ ರಿಸ್ಕ್‌ ಅನೆಲಿಷ್ಟ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಉದ್ಯೋಗಕ್ಕೆ ಸೇರಿಕೊಂಡಿದ್ದರೂ ಅವರ ಗಮನವೆಲ್ಲ ಷೇರುಪೇಟೆಯತ್ತಲೇ ಕೇಂದ್ರೀಕೃತಗೊಂಡಿತ್ತು. ಷೇರು ಆಕರ್ಷಣೆಯಿಂದ ಹೊರಬರಲಾಗದ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದು ಷೇರುಪೇಟೆಯ ವಹಿವಾಟಿನತ್ತ ತಮ್ಮೆಲ್ಲ ಗಮನ ಕೇಂದ್ರೀಕರಿಸಿದರು. ಮನೆಯವರಿಗೆ ಷೇರುಪೇಟೆ ವಹಿವಾಟಿನ ಕುರಿತ ತಮ್ಮ ಹಂಬಲ, ತುಡಿತವನ್ನು ಮನವರಿಕೆ ಮಾಡಿಕೊಟ್ಟ ನಂತರ ಅವರಿಂದಲೂ ಬೆಂಬಲ ಪಡೆದರು.
ಷೇರುಪೇಟೆಯ ವಹಿವಾಟಿನಲ್ಲಿ ಹಣ ತೊಡಗಿಸಿದವರು ಹಣ ಕಳೆದುಕೊಂಡು ಕೈಸುಟ್ಟುಕೊಳ್ಳಬೇಕಾಗುತ್ತದೆ ಎನ್ನುವ ಗ್ರಹಿಕೆ ಸಾಮಾನ್ಯವಾಗಿ ಎಲ್ಲರಲ್ಲಿ ಇದೆ. ಉತ್ತಮ ಸಂಬಳದ ಉದ್ಯೋಗ ಸೇರಿ ಕುಟುಂಬಕ್ಕೆ ಆಸರೆಯಾಗಬೇಕಾದ ಮಕ್ಕಳು ಷೇರುಪೇಟೆಯತ್ತ ಆಕರ್ಷಿತರಾಗಿರುವುದು ಕಂಡು ಪಾಲಕರು ಸಹಜವಾಗಿಯೇ ಆತಂಕಗೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಇವರಿಬ್ಬರೂ ಆರಂಭದಲ್ಲಿ ತಮ್ಮ ಷೇರುವಹಿವಾಟಿನ ದುಸ್ಸಾಹಸದ ಬಗ್ಗೆ ಕುಟುಂಬಕ್ಕೆ ಮಾಹಿತಿಯನ್ನೇ ನೀಡಿರಲಿಲ್ಲ. ಕುಟುಂಬದವರ ಒತ್ತಾಯಕ್ಕೆ ಕಟ್ಟುಬಿದ್ದು ಕಾರ್ಪೊರೇಟ್‌ ಉದ್ಯೋಗಕ್ಕೆ ಸೇರಿಕೊಂಡರೂ ಷೇರುಪೇಟೆಯ ಮೋಹದಿಂದ ದೂರವಾಗಿರಲಿಲ್ಲ. ಉದ್ಯೋಗ ಅಥವಾ ಸ್ವಂತ ಉದ್ದಿಮೆ – ಇವೆರೆಡರಲ್ಲಿ ಕೊನೆಗೂ ಇವರಿಬ್ಬರ ಬದುಕಿನಲ್ಲಿ ಷೇರುಪೇಟೆಯ ಆಕರ್ಷಣೆಯೇ ಗೆಲುವಿನ ನಗೆ ಬೀರುತ್ತದೆ.
ಷೇರು ವಹಿವಾಟನ್ನು ತಮ್ಮ ಹಣ ಗಳಿಕೆಯ ಮಾರ್ಗವನ್ನಾಗಿ, ಬದುಕಿನ ವೃತ್ತಿಯನ್ನಾಗಿ ಕಂಡುಕೊಂಡಿದ್ದ ಸಹ ಸ್ಥಾಪಕರಾದ ರಿತ್ವಿಕ್‌ ಮತ್ತು ಆಕಾಶ್‌ ತಮ್ಮ ಯಶಸ್ಸನ್ನು ಇತರರಿಗೂ ಹಂಚಲು ಉದ್ದೇಶಿಸಿ ಅದನ್ನು ಸಾಕಾರಗೊಳಿಸಲು  ಷೇರುವಹಿವಾಟಿನ ತರಬೇತಿ ನೀಡಲು ಕಾರ್ಯಪ್ರವೃತ್ತರಾದರು. ಈ ಮೂಲಕ ಷೇರುಪೇಟೆ ವಹಿವಾಟಿನ ಆನ್‌ಲೈನ್‌ ತರಬೇತಿ ನೀಡುವ ಅತ್ಯಂತ ಕಿರಿಯ ವಯಸ್ಸಿನವರು ಇವರಾಗಿದ್ದಾರೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಚರ್ಚಿಸಲು, ತಮ್ಮೆಲ್ಲ ಅನುಭವವನ್ನು ಇತರರ ಜತೆ ಹಂಚಿಕೊಳ್ಳಲು ಈ ನವೋದ್ಯಮವು ಸಮರ್ಥ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಕನಸು ಕಾಣುತ್ತಲೇ ಗಾವುದ ದೂರ ಇರುವವರಿಗೆ ತರಬೇತಿ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ, ಹಣ ಗಳಿಕೆಯ ವಿಧಾನವನ್ನು ಸುಲಲಿತವಾಗಿ ಕಲಿಸಿಕೊಡುತ್ತಿದೆ. ದೇಶದಲ್ಲಿ 100 ಮಂದಿಯಲ್ಲಿ ಕೇವಲ ಇಬ್ಬರಿಗೆ ಮಾತ್ರ ತಮ್ಮ ಹಣವನ್ನು ಸಮರ್ಪಕವಾಗಿ ನಿರ್ವಹಿಸುವ ಮತ್ತು ಸ್ವತಂತ್ರ ಹಣಕಾಸಿನ ಬದುಕಿಗಾಗಿ ಹೂಡಿಕೆ ಮಾಡುವ ಕಲೆ ಗೊತ್ತಿದೆ. ಜನಸಾಮಾನ್ಯರೂ ಅತ್ಯಂತ ಸುಲಭವಾಗಿ, ತ್ವರಿತವಾಗಿ ಷೇರುಪೇಟೆಯ ಅ, ಆ, ಇ ... ಕರಗತ ಮಾಡಿಕೊಳ್ಳುವ ರೀತಿಯಲ್ಲಿ ಇವರು ತರಬೇತಿ ಕಾರ್ಯಕ್ರಮ ಅಭಿವೃದ್ಧಿಪಡಿಸಿದ್ದಾರೆ. ಜನರಲ್ಲಿನ ಆತಂಕ ನಿವಾರಿಸಿ ಷೇರು ಖರೀದಿ – ಮಾರಾಟದ ತಂತ್ರಗಾರಿಕೆಯನ್ನು ಸುಲಭವಾಗಿ, ತ್ವರಿತವಾಗಿ ಕಲಿಸಿಕೊಡಲಿದ್ದಾರೆ.
‘ಯುವ ಜನತೆಯೂ ಸೇರಿದಂತೆ ಜನಸಾಮಾನ್ಯರಲ್ಲಿ ಹಣಕಾಸಿನ ಸಾಕ್ಷರತೆ ಮೂಡಿಸಿ ಅವರನ್ನು ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಈ ತರಬೇತಿಯ ಉದ್ದೇಶವಾಗಿದೆ’ ಎಂದು ಸ್ಥಾಪಕ ರಿತ್ವಿಕ್‌ ಹೇಳುತ್ತಾರೆ. ಸಹ ಸ್ಥಾಪಕ ಆಕಾಶ್‌ ಜಯನ್‌, ನವೋದ್ಯಮದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನವೋದ್ಯಮದಲ್ಲಿ ಈಗಾಗಲೇ 28 ಜನರು ಪೂರ್ಣಾವಧಿ ಉದ್ಯೋಗಿಗಳಾಗಿದ್ದಾರೆ. ಇವರಲ್ಲಿ ಶೇ 98ರಷ್ಟು ಉದ್ಯೋಗಿಗಳ ಸರಾಸರಿ ವಯಸ್ಸು 24 ಇದೆ. ಜನಸಾಮಾನ್ಯರೂ ಸೇರಿದಂತೆ ಷೇರುಪೇಟೆಯ ವಹಿವಾಟಿನ ಬಗ್ಗೆ ಕುತೂಹಲ ತಾಳಿರುವವರಲ್ಲಿ ಷೇರುಪೇಟೆಯ ಒಳ ಹೊರಗನ್ನು ಪರಿಚಯಿಸಿ, ಲಾಭದಾಯಕವಾಗಿ ವಹಿವಾಟು ನಡೆಸಲು ವೈಜ್ಞಾನಿಕವಾಗಿ ತರಬೇತಿ ನೀಡಲು ಈ ನವೋದ್ಯಮದ ಯುವ ಮನಸ್ಸುಗಳು ದೃಢ ನಿರ್ಧಾರ ಮಾಡಿವೆ. ಮಾಹಿತಿಗೆ  https://havenspire.clickfunnels.com/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
ತರಬೇತಿ ಸ್ವರೂಪ
ಒಂಬತ್ತು ವಾರಗಳ ತರಬೇತಿಯನ್ನು ವೈಜ್ಞಾನಿಕ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಹೆವೆನ್‌ಸ್ಪೈರ್‌ ಕೋರ್ಸ್‌ ಅನ್ನು ಹೊಸಬರು ಸುಲಭವಾಗಿ ಮತ್ತು ವೇಗವಾಗಿ ಕಲಿಯುವಂತೆ ರೂಪಿಸಲಾಗಿದೆ. ತರಬೇತಿ ಅವಧಿಯಲ್ಲಿ ಷೇರು ವಹಿವಾಟಿನ ವಿವಿಧ ತಂತ್ರಗಳನ್ನು ಹೇಳಿಕೊಡುವುದಲ್ಲದೆ, ಷೇರುಪೇಟೆ ಬಗೆಗಿನ ಆತಂಕವನ್ನೂ ನಿವಾರಿಸಲಿದೆ. ಹೆವೆನ್‌ಸ್ಪೈರ್‌ ಲೈವ್‌, ಹೆವೆನ್‌ಸ್ಪೈರ್‌ ಅಕಾಡೆಮಿ ಆಫ್‌ ಟ್ರೇಡ್‌ನಲ್ಲಿ ಸಲಹೆಗಾರರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
* ಮೊದಲ ವಾರ: ಸಹ ಸ್ಥಾಪಕ ಆಕಾಶ್‌ ಅವರಿಂದ ಹಣಕಾಸು ಮಾರುಕಟ್ಟೆಯ ಪ್ರಾಥಮಿಕ ಪರಿಚಯ. ಹಣಕಾಸು ಮಾರುಕಟ್ಟೆಗಳು / ಸಂಸ್ಥೆಗಳು, ಕ್ಯಾಂಡಲ್‌ಸ್ಟಿಕ್‌ ಪ್ಯಾಟರ್ನ್‌, ಮೂವಿಂಗ್‌ ಎವರೇಜಸ್‌ ಮುಂತಾದವುಗಳ ಮಾಹಿತಿ
* 2ನೆ ವಾರ: ಚಾರ್ಟ್‌ಗಳು ಮತ್ತು ಮಾರುಕಟ್ಟೆ ವಿಶ್ಲೇಷಣೆ
* 3 ಮತ್ತು 4ನೆ ವಾರ: ಪ್ರೈಸ್‌ ಆ್ಯಕ್ಸನ್‌, ಬ್ರೆಕ್‌ಔಟ್‌, ಚಾರ್ಟ್‌ ಪ್ಯಾಟರ್ನ್ಸ್‌, ರಿಸ್ಕ್‌ ಮ್ಯಾನೇಜ್‌ಮೆಂಟ್‌
* 5ನೆ ವಾರ: ಇಂಡಿಕೇಟರ್ಸ್‌, ಅಲ್ಗೊರಿಥ್ಮಿಕ್‌ ಟ್ರೇಡಿಂಗ್‌– ಇಂಡಿಕೇಟರ್‌ ಬಗೆಗಳು, ತಾಂತ್ರಿಕ ಇಂಡಿಕೇಟರ್‌ಗಳು
* 6ನೆ ವಾರ: ಟ್ರೇಡ್‌ ಸೆಟ್‌ ಅಪ್ಸ್‌,  ಷೇರುಪೇಟೆ ವಹಿವಾಟಿನ 6 ವರ್ಷಗಳ ಅನುಭವ ಹೊಂದಿರುವ ಸಹ ಸ್ಥಾಪಕ ರಿತ್ವಿಕ್‌ ಜೊತೆ  ಪ್ರಶ್ನೋತ್ತರ
* 7ನೆ ವಾರ: ಫ್ಯೂಚರ್‌ ಆ್ಯಂಡ್‌ ಆಪ್ಶನ್‌
* 8ನೆ ವಾರ: ಕಮಾಡಿಟೀಸ್‌
* 9ನೆ ವಾರ: ವಿದೇಶ ವಿನಿಮಯ ಮತ್ತು ಅಮೆರಿಕದ ಮಾರುಕಟ್ಟೆ

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತ ಕ್ಯಾನ್ಸರ್‌ ನಿಂದ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಮಗುವಿಗೆ ಯಶಸ್ವಿ ಚಿಕಿತ್ಸೆ