6-8 ನೇ ತರಗತಿ ಮಕ್ಕಳಿಗೆ, ಸೆಪ್ಟೆಂಬರ್ ಆರರಿಂದ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ವಾಗತಿಸಿದ್ದಾರೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು " ಮಕ್ಕಳಿಗೆ, ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ಇದು ಅತ್ಯಂತ ಅಗತ್ಯವಿತ್ತು. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ. 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6,7,8ನೇ ತರಗತಿಗಳನ್ನು ಸೆಪ್ಟೆಂಬರ್ 6 ರಿಂದ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದಿದ್ದಾರೆ. ಮಕ್ಕಳ ಹಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಯೋಗ್ಯ ನಿರ್ಧಾರವೆಂದು ಬಣ್ಣಿಸಿದ್ದಾರೆ.