Publish Date: Fri, 26 Apr 2024 (10:10 IST)
Updated Date: Fri, 26 Apr 2024 (10:18 IST)
ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಬೆಳ್ಳಂ ಬೆಳಿಗ್ಗೆ ಸೆಲೆಬ್ರಿಟಿಗಳು ಮತಚಲಾಯಿಸಿದ್ದಾರೆ. ಇಂದು ಬೆಳಿಗ್ಗೆಯೇ ಮತ ಚಲಾಯಿಸಿದ ಸೆಲೆಬ್ರಿಟಿಗಳು ಯಾರು ಎಂದು ನೋಡೋಣ.
ಕರ್ನಾಟಕದಲ್ಲಿ ಇಂದು 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಂಗಳೂರಿನ ತಮ್ಮ ಮತಗಟ್ಟೆಗೆ ತೆರಳಿ ಬೆಳಿಗ್ಗೆಯೇ ಮತ ಚಲಾಯಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಮಾಧ‍್ಯಮಗಳೊಂದಿಗೆ ಮಾತನಾಡಿ ಮತ ಚಲಾಯಿಸುವುದು ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ ಎಂದು ಕರೆ ನೀಡಿದ್ದಾರೆ.
ನಟಿ ಅಮೂಲ್ಯ ಕೂಡಾ ಬೆಳಿಗ್ಗೆಯೇ ತಮ್ಮ ಪತಿ ಜೊತೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ. ಬಿಇಟಿ ಕಾನ್ವೆಂಟ್ ಸ್ಕೂಲ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಅಮೂಲ್ಯ ಮತ್ತು ಪತಿ ಜಗದೀಶ್ ಮತ ಚಲಾವಣೆ ಮಾಡಿದ್ದಾರೆ. ನಿನ್ನೆಯಷ್ಟೇ ಅಮೂಲ್ಯ ಮಾವ, ಬಿಜೆಪಿ ನಾಯಕ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿ ಸುದ್ದಿಯಾಗಿದ್ದರು.
ಇನ್ನೊಂದೆಡೆ ದೊಡ್ಮನೆಯಿಂದ ರಾಘವೇಂದ್ರ ರಾಜ್ ಕುಮಾರ್, ಪತ್ನಿ, ಪುತ್ರ ವಿನಯ್ ರಾಜ್ ಕುಮಾರ್ ಜೊತೆಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಇನ್ನಷ್ಟು ಸೆಲೆಬ್ರಿಟಿಗಳು ಇಂದು ಮತಚಲಾವಣೆ ಮಾಡಲಿದ್ದಾರೆ.