Publish Date: Mon, 21 Jul 2025 (14:27 IST)
Updated Date: Mon, 21 Jul 2025 (14:29 IST)
ಮಂಗಳೂರು: ವ್ಯಕ್ತಿಯೊಬ್ಬರ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿಎ. ಸಮಪರ್ಕ ತನಿಖೆಯಿಂದ ಸತ್ಯ ಹೊರಬರಲಿದೆ. ಆದರೆ ತನಿಖೆ ಪೂರ್ವದಲ್ಲೆ ಪೂರ್ವಗ್ರಹದ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಪವಿತ್ರ ಕ್ಷೇತ್ರಕ್ಕೆ ಧಕ್ಕೆಯಾಗಬಾರದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಮುಂಗಾರು ಅಧಿವೇಶನವು ಆಗಸ್ಟ್ 11ರಿಂದ 22ರವರೆಗೆ ನಡೆಯಲಿದೆ. ಅಧಿವೇಶನದ ಅವಧಿ ವಿಸ್ತರಣೆ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಕಮಿಟಿ ಚರ್ಚಿಸಿ ಅಂತಿಮಗೊಳಿಸುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ 'ಮಂಗಳೂರು' ಎಂದು ಮರುನಾಮಕರಣ ಮಾಡಬೇಕೆಂಬ ವಿಚಾರ ಚರ್ಚೆಯಲ್ಲಿದೆ. ಹೆಸರಿನ ಹಿಂದೆ ಪರಂಪರೆ, ಇತಿಹಾಸ, ಸಂಸ್ಕೃತಿ ಎಲ್ಲವೂ ಅಡಕವಾಗಿರುತ್ತವೆ. ಹಿರಿಯರು, ಸಾಹಿತಿಗಳು, ಬರಹಗಾರರು, ತಜ್ಞರ ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು ಎಂದರು.
ಮಂಗಳೂರು ಅಭಿವೃದ್ಧಿಯಾಗಲು ಹೆಸರಿಗಿಂತ ಈ ನೆಲದಲ್ಲಿ ಸೌಹಾರ್ದ ವಾತಾವರಣ ಬೇಕು. ಅದಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕು. ಹೆಸರಿಗಿಂತ ಪ್ರೀತಿ, ವಿಶ್ವಾಸ, ಭಯರಹಿತ, ದ್ವೇಷರಹಿತ ಸಮಾಜ ಮಂಗಳೂರಿಗೆ ಅತಿ ಅಗತ್ಯವಾಗಿದೆ. ಇದರ ಬಗ್ಗೆ ಚರ್ಚೆಯಾಗಲಿ ಎಂದು ಖಾದರ್ ಹೇಳಿದರು.