ಮಂಗಳೂರು: ಸುಮೋಟೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂ.ಡಿ. ಕೊನೆಗೂ ಬೆಳ್ತಂಗಡಿ ಪೊಲೀಸ್ ಠಾಣೆ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮೂವರು ವಕೀಲರೊಂದಿಗೆ ಬಂದ ಸಮೀರ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ದಾಖಲೆಯೊಂದಿಗೆ ಹಾಜರಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಇಂದು ಸಮೀರ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದರು. ಆದರೆ, ಜಾಮೀನು ಪಡೆದು ರಿಲೀಫ್ ಪಡೆದಿದ್ದರು. ಆದರೆ, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.
ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದರು. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅದರಂತೆ ಸಮೀರ್ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಬರುದ್ದಾರೆ. ಬೆಳಿಗ್ಗೆ 10.30ಕ್ಕೆ ಬರುವುದಾಗಿ ತಿಳಿಸಿದ್ದ ಸಮೀರ್ ತಡವಾಗಿ ಬಂದಿದ್ದಾರೆ.