ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕವೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದವರೇ ಆದ ಶಾಸಕ ಆರ್ ವಿ ದೇಶಪಾಂಡೆ ಉಚಿತ ಗ್ಯಾರಂಟಿಗಳು ಅಪಾಯಕಾರಿ, ಯಾವುದನ್ನೂ ಉಚಿತವಾಗಿ ಕೊಡಬಾರದು ಎನ್ನುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಉಚಿತ ಯೋಜನೆಗಳು ಅಪಾಯಕಾರಿ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು. ಪ್ರತಿಯೊಂದು ಸೇವೆಗೂ ಶುಲ್ಕ ವಿಧಿಸಬೇಕು. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಇದನ್ನು ಪುರುಷರಿಗೂ ವಿಸ್ತರಿಸಬೇಕು ಎಂದು ಬೇಡಿಕೆಯಿತ್ತು. ಆದರೆ ಎಲ್ಲರಿಗೂ ಫ್ರೀ ನೀಡಿದರೆ ಸಾರಿಗೆ ಇಲಾಖೆ ನಡೆಸುವುದು ಹೇಗೆ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವಿಪ್ಕ್ಷಗಳಿಗೆ ಅಸ್ತ್ರವಾಗಲಿದೆ. ಈ ಹಿಂದೆ ಉಚಿತ ಯೋಜನೆಗಳ ಬಗ್ಗೆ ಮಾತನಾಡಿದಾಗಲೆಲ್ಲಾ ಕಾಂಗ್ರೆಸ್ ನಾಯಕರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಉಚಿತ ಯೋಜನೆಗಳು ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂಬ ಆರೋಪಗಳಿವೆ. ಆದರೆ ಸದ್ಯಕ್ಕೆ ಬಿಸಿ ತುಪ್ಪ ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿ ಕಾಂಗ್ರೆಸ್ ನದ್ದು.