Publish Date: Mon, 28 Mar 2022 (19:30 IST)
Updated Date: Mon, 28 Mar 2022 (19:36 IST)
ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡು 32 ದಿನಗಳು ಕಳೆದಿದೆ. ಎರಡೂ ದೇಶಗಳ ನಡುವೆ ಘನಘೋರ ಕದನ ನಡೆಯುತ್ತಿದೆ. ಆ ಎರಡು ರಾಷ್ಟ್ರಗಳ ನಡುವೆ ಕದನ ನಡೆಯುತ್ತಿದ್ದರೂ ಅದರ ಪರಿಣಾಮಗಳು ಇಡೀ ವಿಶ್ವದ ಮೇಲೆ ತಟ್ಟಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಸೋಮವಾರ ಟರ್ಕಿಯಲ್ಲಿ ಎರಡನೇ ಸುತ್ತಿನ ಸಂಧಾನ ಮಾತುಕತೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನೇತೃತ್ವದಲ್ಲಿ28 – 30 ರಂದು ರಷ್ಯಾ- ಉಕ್ರೇನ್ ನಡುವೆ ಸಂಧಾನ ಮಾತುಕತೆ ನಡೆಯಲಿದೆ. ಕೀವ್ ಮತ್ತು ಮಾಸ್ಕೋದ ಸಂಧಾನ ಕಾರರು ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಶಾಂತಿ ಮಾತುಕತೆ ನಡೆಸಲಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಟರ್ಕಿ ಅಧ್ಯಕ್ಷ ಎರ್ಡೋರ್ಗನ್ ನಡುವೆ ಭಾನುವಾರ ನಡೆದು ದೂರವಾಣಿ ಸಂಭಾಷಣೆ ವೇಳೆ ಸಂಧಾನ ಮಾತುಕತೆಗೆ ಒಪ್ಪಿಕೊಳ್ಳಲಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷದ ಕುರಿತಂತೆ ಉಭಯ ನಾಯಕರು ಚರ್ಚಿಸಿದರು. ಈ ವೇಳೆ ಮುಂದಿನ ಸಭೆಯನ್ನು ಇಸ್ತಾಂಬುಲ್ನಲ್ಲಿ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ಎರ್ಡೋರ್ಗನ್ ಹೇಳಿಕೆ ನೀಡಿದ್ದಾರೆ. ಮಾರ್ಚ್ 28 – 30 ರಂದು ಟರ್ಕಿಯಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಕ್ರೇನ್ ನ ಸಂಧಾನಕಾರ ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಸಂಧಾನ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಸಹ ಈ ವಿಚಾರವನ್ನು ದೃಢಪಡಿಸಿದ್ದಾರೆ.