ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೆ, ಕೊರೊನಾ ಇದ್ದಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡಿ, ಇನ್ನುಳಿದ ಪ್ರದೇಶಗಳಲ್ಲಿನ ಶಾಲೆಗಳನ್ನು ತೆರೆಯಲು ಅನುಮತಿ ನೀಡಿ ಎಂದು ರುಪ್ಸಾ ಮನವಿ ಮಾಡಿದೆ.
ತಜ್ಞರು ಕೂಡ ಮೂರನೇ ಅಲೆಯಲ್ಲಿ ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ, ಶಾಲಾ - ಕಾಲೇಜುಗಳಲ್ಲಿಯೇ ಹೆಚ್ಚಾಗಿ ಸೋಂಕಿತರು ಪತ್ತೆಯಾಗುತ್ತಿದ್ದರು. ಹೀಗಾಗಿ ರಾಜ್ಯದಲ್ಲಿನ 6 ಜಿಲ್ಲೆಗಳ ಶಾಲೆಗಳನ್ನು ಬಂದ್ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ 1 ರಿಂದ 8 ಅಥವಾ 9 ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡಲಾಗಿದೆ.
ಆದರೆ, ಇದಕ್ಕೆ ರುಪ್ಸಾ ಖಾಸಗಿ ಒಕ್ಕೂಟ ಆಕ್ರೋಶ ವ್ಯಕ್ತಪಡಿಸುತ್ತಿದ್ದು, 5ನೇ ತರಗತಿಯ ಮೇಲ್ಪಟ್ಟ ತರಗತಿಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಅಲ್ಲದೇ, ಕೊರೊನಾ ಬಂದಿರುವ ಶಾಲೆಗಳನ್ನು ಮಾತ್ರ ಬಂದ್ ಮಾಡಿ. ಅದು ಬಿಟ್ಟು ಇಡೀ ಜಿಲ್ಲೆಯಲ್ಲಿ ಈ ನಿಯಮ ಜಾರಿಗೆ ತರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.
ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಬೆಳಗಾವಿ, ಧಾರವಾಡ, ಮೈಸೂರು, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಇಲ್ಲಿ 5ನೇ ತರಗತಿಯ ಮೇಲ್ಪಟ್ಟ ಶಾಲೆಗಳನ್ನು ತೆರೆಯಬೇಕು ಎಂದು ರುಪ್ಸಾ ಮನವಿ ಮಾಡಿದೆ.
ಶಾಲೆಗಳಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದರೂ ಕೊರೊನಾ ಸ್ಫೋಟವಾಗುತ್ತಿರುವುದಕ್ಕೆ ಹಲವೆಡೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದು, ಭೌತಿಕ ತರಗತಿಗಳನ್ನು ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.