ನಗರದಲ್ಲಿ ಇದುವರೆಗೂ 738 ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ಸೂಚಿಸಿದ್ದಾರೆ.ಪೊಲೀಸ್ ಠಾಣೆಯ ಹೊರಗೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಕೋವಿಡ್ ಪರೀಕ್ಷೆ ಹೆಚ್ಚಳ ಮಾಡುವಂತೆಯೂ ಅವರು ಸಲಹೆ ನೀಡಿದ್ದಾರೆ.
ಆಯಾ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೆಲಸಕ್ಕೆ ಬಾರದೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಅವರು ತಿಳಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಆಯಾ ವಿಭಾಗದ ಡಿಸಿಪಿಗಳು ಮತ್ತು ಇನ್ಸ್‍ಪೆಕ್ಟರ್‍ಗಳು ಕಾಳಜಿ ವಹಿಸುವಂತೆ ಸೂಚನೆ ನೀಡಿರುವ ಆಯುಕ್ತರು, ಹಿರಿಯ ಎಎಸ್‍ಐ ಸಿಬ್ಬಂದಿಗಳೂ ಸಹ ಠಾಣೆಗಳಲ್ಲೇ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದ್ದಾರೆ.
ಎಲ್ಲಾ ಹಿರಿಯ ಸಿಬ್ಬಂದಿಗಳನ್ನು ಹೊರತುಪಡಿಸಿ ಹೊಯ್ಸಳ ರೌಂಡ್ಸ್ ಮತ್ತು ಚೀತಾ ಗಸ್ತು ಮಾಡಲು ಯುವ ಸಿಬ್ಬಂದಿ ತೆರಳಲು ಸೂಚಿಸಿರುವ ಆಯುಕ್ತರು, ಎಲ್ಲಾ ಠಾಣೆಗಳಲ್ಲಿ ಹಾಗೂ ವಾಹನಗಳಿಗೆ ಪ್ರತಿನಿತ್ಯ ಎರಡು ಬಾರಿ ಸ್ಯಾನಿಟೈಸರ್ ಮತ್ತು ಸಿಬ್ಬಂದಿಗೆ ಫೇಸ್ ಶೀಲ್ಡ್ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿರುವ ಅವರು, ಇನ್ಸ್‍ಪೆಕ್ಟರ್ ಮತ್ತು ಡಿಸಿಪಿಗಳು ಸೋಂಕಿತ ಸಿಬ್ಬಂದಿಯ ಆರೋಗ್ಯ ಮತ್ತು ಅವರ ಕಟುಂಬದವರ ಯೋಗ ಕ್ಷೇಮ ವಿಚಾರಿಸಬೇಕೆಂದು ಸೂಚಿಸಿದ್ದಾರೆ.