Select Your Language

Notifications

webdunia
webdunia
webdunia
webdunia

ಪಠ್ಯಕ್ರಮದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ

ಪಠ್ಯಕ್ರಮದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ
bangalore , ಸೋಮವಾರ, 23 ಮೇ 2022 (21:16 IST)
campus education
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು ಹತ್ತನೆಯ ತರಗತಿಯ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದ್ದು, ಇದು ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದ್ದು ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತಿದೆ. 
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಲಾಗಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯವೆಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸುತ್ತಿದೆ. 
 
ಯಾರು ಈ ಹೆಡ್ಗೆವಾರ್ ??
 
ಹೆಗ್ಡೆವಾರ್ ಅವರ ಶಿಕ್ಷಣದ ನಂತರ ಬಂಗಾಳದಲ್ಲಿ ಅನುಶೀಲನ್ ಸಮಿತಿ (ಹಿಂದೂ ಕ್ರಾಂತಿಕಾರಿಗಳು) ಅದರ ಭಾಗವಾಗಿದ್ದರು. 1920 ರ ದಶಕದಲ್ಲಿ ಕಾಂಗ್ರೆಸ್‌ಗೆ ಸೇರಿದರು ಆದರೆ ಹಿಂದೂ ಮತ್ತು ಮುಸಲ್ಮಾನರ ನಡುವೆ ಐಕ್ಯತೆಯ ನೀತಿಯನ್ನು ಕಾಂಗ್ರೆಸ್ ಪಾಲಿಸುತ್ತಿದೆಯೆಂದು ಅದನ್ನು ತೊರೆದರು.ಖಿಲಾಫತ್ ಹೋರಾಟದಿಂದಾಗಿ ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯನ್ನು ಹೆಡ್ಗೆವಾರ್ ಒಪ್ಪಲಿಲ್ಲ, ನಂತರ ಹಿಂದೂ ರಾಷ್ಟ್ರದ ಗುರಿಗಾಗಿ 1925 ರಲ್ಲಿ RSS ಅನ್ನು ಸ್ಥಾಪಿಸಿದರು. 1929 ರಲ್ಲಿ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ ಅನ್ನು ಅಂಗೀಕರಿಸಿತು,
ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರು ಭಗವಾಧ್ವಜವನ್ನು ಹಾರಿಸಲು ಆರ್ಎಸ್ಎಸ್ ಕಾರ್ಯಕರ್ತರನ್ನು ಒತ್ತಾಯಿಸಿದರು. ಸಂಘದ ಯಾವುದೇ ಜವಾಬ್ದಾರಿಯುತ ಕಾರ್ಯಕರ್ತರು 1930 ರ ದಶಕದಲ್ಲಿ ನಡೆದ ಗಾಂಧೀಜಿಯವರ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಸಿಪಿ ಭಿಷಿಕರ್ ಎಂಬವರು ಬರೆದ ಹೆಡ್ಗೆವಾರ್ ರ ಅಧಿಕೃತ  ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.
 
ಉದ್ದೇಶಪೂರ್ವಕವಾಗಿ ಪಠ್ಯಪುಸ್ತಕದ ಪಠ್ಯ ಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದ ಗರಡಿಯಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥ ರಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಅರಿತು ಸಮಾಜದಲ್ಲಿ ಸೈಹಾರ್ದತೆ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಲಿಕೆ, ವಿದ್ಯೆಯನ್ನು ನೀಡಬೇಕು ಹೊರತು ಹಿಂದೂ ರಾಷ್ಟ್ರವೆಂಬ ಸಂವಿಧಾನಕ್ಕೆ ಅಪಚಾರವೆಸಗುವ ದೇಶವಿರೋಧಿ ಆಲೋಚನೆ ಹೊಂದಿದ್ದ ವ್ಯಕ್ತಿಗಳ ಭಾಷಣ ಹೇಳಿ ಕೊಡುವ ಸರಕಾರದ ಈ ಕೃತ್ಯ ನೈಜ ಸ್ವಾತಂತ್ರ್ಯ ಹೋರಾಟಗಾರರರಿಗೆ ಅಪಮಾನ ಮಾಡುವಂತಿದೆ ಅದಲ್ಲದೆ, ಇದು ದೇಶದ್ರೋಹದ ನಡೆಯಾಗಿದೆ. 
 
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತನ್ನದೇ ಆದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಜನರ ದಾರಿ ತಪ್ಪಿಸಿದ ದೇಶದ್ರೋಹಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ದಾಂತದ ಹೇರಿಕೆಯೆಂಬುದು ಸ್ಪಷ್ಟವಾಗಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸುತ್ತಿದೆ ಹಾಗೂ ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರ ಪಠ್ಯಕ್ರಮದಿಂದ ಕೈ ಬಿಡದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.
 
ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಠಿಸುತ್ತಿರುವ ಬಿಜೆಪಿ ಸರ್ಕಾರ
 
ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅರಾಜತೆಯನ್ನು ಬಿಜೆಪಿ ಸರ್ಕಾರವು ನಿರಂತರವಾಗಿ ನಡೆಸುತ್ತಿದೆ, ಶಿಕ್ಷಣದ ಕೇಸರೀಕರಣ,ಭ್ರಷ್ಟಾಚಾರ ಹಾಗೂ ಹಗರಣ ಪ್ರಕರಣಗಳು ಇನ್ನಿತರ ಹಲವಾರು ಸಮಸ್ಯೆಗಳು ಕಾಡುತ್ತಿದೆ. ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ವ್ಯಾಸಾಂಗ ನಡೆಸುತ್ತಿರುವ ಶಾಲೆಗಳಲ್ಲಿ ಭಗವದ್ಗೀತೆಯ ಹೇರಿಕೆ, ದೇಶದ್ರೋಹಿ ಹೆಡ್ಗೆವಾರ್ ನ ಭಾಷಣದ ಸೇರ್ಪಡೆ ಹಾಗೂ ಪ್ರಗತಿಪರರ, ಸ್ವಾತಂತ್ರ್ಯ ಹೋರಾಟಗಾರರ ಪಠ್ಯಗಳಿಗೆ ಕತ್ತರಿ ಹಾಕುವ ಮುಖಾಂತರ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣವಾಗಿ ಬ್ರಾಹ್ಮಣೀಕರಣದ ಕೇಸರೀಕರಣ ನಡೆಸಲು ಮುಂದಾಗಿದೆ.
ಇನ್ನೊಂದು ಕಡೆ ನೋಡುವುದಾದರೆ ಹಗರಣಗಳು ಬಹಳ ನಾಜೂಕಾಗಿ ನಡೆಯುತ್ತಿದೆ, ಮಕ್ಕಳ ಸಮವಸ್ತ್ರದಲ್ಲೂ ಹಗರಣ ನಡೆಸಿದ ಬಿಜೆಪಿ ಸರ್ಕಾರ, ಪಿಎಸ್ಐ ನೇಮಕಾತಿಯಲ್ಲೂ ಬಹುದೊಡ್ಡ ಹಗರಣ ನಡೆಸಿದೆ. ಇದೀಗಾಗಲೇ ತನಿಖೆ ನಡೆಯುತ್ತಿದ್ದು ಹಲವಾರು ಬಿಜೆಪಿ, ಎಬಿವಿಪಿ ನಾಯಕರು ಬಂಧಿಸಲ್ಪಟ್ಟಿದ್ದಾರೆ, ಈ ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತಿದೆ. 
 
ಹಿಂದುತ್ವದ ಅಮಲೇರಿದ ಶಿಕ್ಷಣ ಸಚಿವ ಬಿಸಿ ನಾಗೇಶ್
ಕರ್ನಾಟಕದ ಶಿಕ್ಷಣ ಸಚಿವ ಬಿಸಿ ನಾಗೇಶ್ ರವರಿಗೆ ಹಿಂದುತ್ವದ ಅಮಲೇರಿದೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಾದ ಅರಾಜಕತೆಗೆ ಶಿಕ್ಷಣ ಸಚಿವರೇ ನೇರ ಹೊಣೆಯಾಗಿದ್ದಾರೆ. ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ, ಒಂದು ಸಮುದಾಯವನ್ನು ನಿರಂತರವಾಗಿ ಗುರಿಯಾಗಿಸುತ್ತಾ ಇರುವ ಶಿಕ್ಷಣ ಸಚಿವ ಬಿಸಿ ನಾಗೇಶ್ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಲ್ಲ, ತಮ್ಮ ಕುರ್ಚಿಯನ್ನು ಭದ್ರವಾಗಿಸಲು ಬೇಕಾಗಿ ಸಚಿವರು ಇಂತಹ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮುಧ್ರುವೀಕರಣ ನಡೆಸುತ್ತಿದ್ದಾರೆ. ತಕ್ಷಣ ರಾಜಿನಾಮೆ ನೀಡಿ ಎಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸುತ್ತಿದೆ.
 
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ , ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ , ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯ ಪುಸ್ತಕದ ವಿವಾದಕ್ಕೆ ತೆರೆಎಳೆದ ಶಿಕ್ಷಣ ಇಲಾಖೆ