Select Your Language

Notifications

webdunia
webdunia
webdunia
webdunia

ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ ಭ್ರಷ್ಟಾಚಾರ: ಸಾರಾ ಮಹೇಶ್ ಆರೋಪ

ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ ಭ್ರಷ್ಟಾಚಾರ: ಸಾರಾ ಮಹೇಶ್ ಆರೋಪ
ಬೆಂಗಳೂರು , ಶನಿವಾರ, 4 ಸೆಪ್ಟಂಬರ್ 2021 (08:31 IST)
ಬೆಂಗಳೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ IAS ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಮುಂದುವರೆದಿದೆ. ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಬಳಿಕವೂ ಸಾರಾ ಮಹೇಶ್ ಮತ್ತೆ ಸಿಡಿದೆದ್ದಿದ್ದಾರೆ.

ಮೈಸೂರು ಡಿಸಿ ಆಗಿದ್ದ ಸಮಯದಲ್ಲಿ ರೋಹಿಣಿ ಸಿಂಧೂರಿ, ಪರಿಸರ ಸ್ನೇಹಿ ಬ್ಯಾಗ್ ಗಳಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಶಾಸಕರು ಆರೋಪಿಸಿ ದೂರು ದಾಖಲಿಸಿದ್ದಾರೆ. ಪರಿಸರ ಸ್ನೇಹಿ ಬ್ಯಾಗ್ ಹಿಡಿದು ವಿಧಾನಸೌಧಕ್ಕೆ ಬಂದ ಸಾರಾ ಮಹೇಶ್ , ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ಗೆ ದೂರು ನೀಡಿದರು. ಪರಿಸರ ಸ್ನೇಹಿ ಬ್ಯಾಗ್ ಹಾಗೂ ಅವ್ಯವಹಾರದ ದಾಖಲೆ ಸಮೇತ ದೂರು ಕೊಟ್ಟರು.
ರೋಹಿಣಿ ಸಿಂಧೂರಿನ ಅಮಾನತು ಮಾಡಿ..
ದೂರು ನೀಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕ ಸಾ ರಾ ಮಹೇಶ್, ದುಬಾರಿ ಬ್ಯಾಗ್ ಗಳ ಖರೀದಿ ಮೂಲಕ ರೋಹಿಣಿ ಸಿಂಧೂರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು. ರೋಹಿಣಿ ಸಿಂಧೂರಿ ಮೇಲೆ 7 ರಿಂದ 8 ಪ್ರಕರಣಗಳು ಇವೆ, ಹೀಗಾಗಿ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದರು. 6 ಕೋಟಿ ವೆಚ್ಚದಲ್ಲಿ 14,71,458 ಬ್ಯಾಗ್ ಗಳ ಖರೀದಿ ಮಾಡಿದ್ದಾರೆ. ಬ್ಯಾಗ್ ಬೆಲೆ 9 ರೂ. ಜಿಎಸ್ ಟಿ ಸೇರಿ 12 ರೂ. ಬೀಳಲಿದೆ. ಒಟ್ಟು ಒಂದು ಬ್ಯಾಗ್ ಗೆ 12 ರೂ.ಬೀಳಲಿದೆ. ಆದರೆ ಈಗ ಅದಕ್ಕೆ 52 ರೂ. ಹಣ ಕೊಟ್ಟು ಖರೀದಿಸಲಾಗಿದೆ. ಒಟ್ಟು ಬ್ಯಾಗ್ ಖರೀದಿಗೆ 6.18 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು. ಬ್ಯಾಗ್, ದಾಖಲೆ ಸಮೇತ ದೂರು ನೀಡಿ, ಅದನ್ನು ಮಾಧ್ಯಮಗಳ ಮುಂದೆಯೂ ಪ್ರದರ್ಶಿಸಿದರು.
ಈಜುಕೊಳ ನಿರ್ಮಾಣ ವಿವಾದ
ಈ ಹಿಂದೆ  ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿಯ ನಿವಾಸದ ಈಜುಕೊಳ, ಅವರ ಜೀವನಾಧಾರಿತ ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿ ಕಿಡಿ ಕಾರಿದ್ದಾರೆ. ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ, ಮಾಡಲಿ. ನಾವೂ ಕೂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ವಿಚಾರವಾಗಿ ಸಿಬಿಐ ವರದಿಯನ್ನು ಆಧರಿಸಿ ಸಿನಿಮಾ ತೆಗೆಯುತ್ತೇವೆ. ಮೊದಲು ರಾಜ್ಯ ಸರ್ಕಾರ ಅಧಿಕಾರಿಗಳ ಕೆಲಸ ಏನು ಎಂಬುದನ್ನು ಅವರು ಅರಿತುಕೊಳ್ಳಬೇಕು. ಅವರಿಗೇಕೆ ಪ್ರಚಾರದ ಹುಚ್ಚು? ಎಂದು ಟೀಕಿಸಿದ್ದರು.
ಮೃತ ಐಎಎಸ್ ಅಧಿಕಾರಿ ಸಿನಿಮಾ ತೆಗಿತೀವಿ..
ಭಾರತ ಸಿಂಧೂರಿ ಎಂಬ ಹೆಸರಿನಲ್ಲಿ ರೋಹಿಣಿ ಸಿಂಧೂರಿ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿರುವ ವಿಚಾರವಾಗಿ ವ್ಯಂಗ್ಯವಾಡಿದ್ದ ಶಾಸಕ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಕತೆಯಾಧಾರಿಯ ಸಿನಿಮಾ ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಬಡ ರೈತನ ಮಗ ಐಎಎಸ್ ಅಧಿಕಾರಿಯಾಗಿ ಆಂಧ್ರದ ಅಧಿಕಾರಿಯ ಸಹವಾಸ ಮಾಡಿ ಏನೆಲ್ಲ ಆದ ಎಂಬುದನ್ನು ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು.
ಇನ್ನು ರೋಹಿಣಿ ಸಿಂಧೂರಿ ಸಹ ಶಾಸಕ ಸಾರಾ ಮಹೇಶ್ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದರು. ಭೂ ಒತ್ತುವರಿ ಮಾಡಿ ಶಾಸಕರು ಚೌಟ್ರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು. ಆರೋಪ-ಪ್ರತ್ಯಾರೋಪಗಳ ಮಧ್ಯೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಈಗ ಮತ್ತೆ ಸಾರಾ ಮಹೇಶ್ ಅವರು ಈಎಎಸ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜಾಪ್ರಭುತ್ವದ ಕಾವಲುಗಾರರಿಗೆ ಯಾತನೆ ಸೃಷ್ಟಿಸಲಿದೆ ಎಂದ ಕೋರ್ಟ್