Publish Date: Mon, 04 Mar 2024 (10:45 IST)
Updated Date: Mon, 04 Mar 2024 (10:51 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ತಯಾರಿಯಲ್ಲಿರುವ ಸುಮಲತಾ ಅಂಬರೀಶ್ ಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈ ಹಿಡಿಯುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ. ಆದರೆ ಸುಮಲತಾ ಬಿಜೆಪಿ ಅಭ್ಯರ್ಥಿಯಾಗಿ ತಾನೇ ಕಣಕ್ಕಿಳಿಯಲಿದ್ದೇನೆ ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ ತಯಾರಿಯನ್ನೂ ಶುರು ಮಾಡಿದ್ದಾರೆ.
ಕಳೆದ ಬಾರಿ ಸುಮಲತಾ ಇದೇ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ದರ್ಶನ್ ಮತ್ತು ಯಶ್ ಜೋಡೆತ್ತುಗಳಂತೆ ಸುಮಲತಾಗೆ ಬೆಂಬಲವಾಗಿ ನಿಂತಿದ್ದರು. ಆದರೆ ಈ ಬಾರಿ ದರ್ಶನ್ ಬರಬಹುದಾದರೂ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಯಶ್ ಬರಲ್ಲ ಎನಿಸುತ್ತಿದೆ.
ಈಗಾಗಲೇ ಮಾಧ್ಯಮಗಳ ಮುಂದೆ ಯಶ್, ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದಿದ್ದರು. ಯಶ್ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಕಳೆದ ಬಾರಿ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಬೇರೆ ಪಕ್ಷದ ನಾಯಕರು ಅವರ ವಿರುದ್ಧ ಟೀಕೆಎ ಮಾಡಿದ್ದರು. ಈ ಬಗ್ಗೆ ಅವರಿಗೆ ತುಂಬಾ ಬೇಸರವಿದೆ. ಆಗಲೇ ಮೂರು ನಾಲ್ಕು ಬಾರಿ ಈ ಬಗ್ಗೆ ಮಾತನಾಡಿದ್ದರು. ರಾಜಕಾರಣ ಎಂದರೆ ಇಷ್ಟು ಕಹಿಯೇ ಎಂದು ಬೇಸರಿಸಿಕೊಂಡಿದ್ದರು. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರು ತುಂಬಾ ಬ್ಯುಸಿಯಾಗಿದ್ದಾರೆ. ಹೀಗಾಗಿ ಈಗ ಮತ್ತೆ ಅವರಿಂದ ಪ್ರಚಾರ ನಿರೀಕ್ಷೆ ಮಾಡಲು ಸಾಧ‍್ಯವಿಲ್ಲ ಎಂದಿದ್ದಾರೆ. ಹೀಗಾಗಿ ಈ ಬಾರಿ ಸುಮಲತಾ ಪರ ಯಶ್ ಪ್ರಚಾರಕ್ಕಿಳಿಯಲ್ಲ ಎನ್ನುವುದು ಸ್ಪಷ್ಟವಾಗಿದೆ.