ಬೆಂಗಳೂರು: ಡೀಸೆಲ್- ಪೆಟ್ರೋಲ್ ದರ ಏರಿಕೆ ವಿರೋಧಿಸಿ ಮತ್ತು ಈ ದರ ಏರಿಕೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ನಾಳೆ (ಜೂನ್ 20, ಗುರುವಾರ) ಎರಡನೇ ಹಂತದ ಹೋರಾಟ ನಡೆಸಲಾಗುವುದು ಎಂದು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಿದ್ದೇವೆ. ನಾಳೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ರಸ್ತೆತಡೆ ಆಂದೋಲನ ನಡೆಸಲಿದ್ದೇವೆ ಎಂದು ವಿವರಿಸಿದರು.
ವಿಪರೀತ ತೆರಿಗೆ ಶುಲ್ಕ ಹೆಚ್ಚಳದ ಅಭಿಯಾನವನ್ನೇ ರಾಜ್ಯ ಸರಕಾರ ನಡೆಸುತ್ತಿದೆ; ಹಲವಾರು ಕ್ಷೇತ್ರಗಳ ತೆರಿಗೆಯನ್ನು ಈ ಸರಕಾರ ಹೆಚ್ಚಿಸಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರವು ಕರ್ನಾಟಕದ ಜನರ ಜೀವನವನ್ನೇ ಕಷ್ಟದಾಯಕವನ್ನಾಗಿ ಮಾಡಿದೆ ಎಂದು ಟೀಕಿಸಿದರು.
ಜನರ ಬದುಕನ್ನೇ ದುಸ್ತರವನ್ನಾಗಿ ಮಾಡಿದ ಜನವಿರೋಧಿ ಸರಕಾರ ಇದು. ರೈತವಿರೋಧಿ, ಎಸ್‍ಸಿ, ಎಸ್‍ಟಿ, ಒಬಿಸಿಗಳ ವಿರೋಧಿ ಸರಕಾರ ಇದಾಗಿದ್ದು, ಸಿದ್ದರಾಮಯ್ಯನವರ ನೇತೃತ್ವದ ಈ ಸರಕಾರ ಕೂಡಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.<>