ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾಗಿದ್ದಾನೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಮಗನಿಗೆ ನಿನ್ನೆ ನಾಮಕರಣವಾಗಿದೆ. ನಾಮಕರಣದ ಬಳಿಕ ರೇಣುಕಾಸ್ವಾಮಿ ತಂದೆ ಮತ್ತೊಮ್ಮೆ ಸೊಸೆಗೆ ಸರ್ಕಾರೀ ಕೆಲಸ ಕೊಡಿಸಿ ಎಂದು ಮೊರೆಯಿಟ್ಟಿದ್ದಾರೆ.
ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ದರ್ಶನ್ ಆಂಡ್ ಗ್ಯಾಂಗ್ ಉಪಾಯವಾಗಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಪಟ್ಟಣಗೆರೆ ಶೆಡ್ ನಲ್ಲಿ ಕೂಡಿ ಹಾಕಿ ದೈಹಿಕವಾಗಿ ಹಿಂಸಿಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂಬುದು ಆರೋಪವಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಎಲ್ಲಾ ಆರೋಪಿಗಳೂ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಈ ನಡುವೆ ರೇಣುಕಾಸ್ವಾಮಿ ಕೊಲೆಗೀಡಾಗುವಾಗ ಆತನ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಇದೀಗ ಗಂಡು ಮಗು ಜನನವಾಗಿದ್ದು, ಐದು ತಿಂಗಳ ಬಳಿಕ ಸೊಸೆ, ಮೊಮ್ಮಗನನ್ನು ರೇಣುಕಾಸ್ವಾಮಿ ಪೋಷಕರು ಮನೆಗೆ ಬರಮಾಡಿಕೊಂಡು ನಾಮಕರಣ ಮಾಡಿದ್ದಾರೆ.
ಮಗುವಿಗೆ ಶಶಿಧರ ಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ನಾಮಕರಣದ ಬಳಿಕ ಮಾಧ್ಯಮದವರ ಮುಂದೆ ಮಾತನಾಡಿದ ರೇಣುಕಾಸ್ವಾಮಿ ತಂದೆ, ಮೊಮ್ಮಗ ಮನೆಗೆ ಬಂದಿದ್ದು ಸಂತೋಷವಾಗಿದೆ. ಆದರೂ ಹಳೆಯ ನೋವನ್ನು ಮರೆಯಲಾಗುತ್ತಿಲ್ಲ. ಅನುಕಂಪದ ಆಧಾರದಲ್ಲಿ ನಮ್ಮ ಸೊಸೆಗೆ ಸರ್ಕಾರೀ ನೌಕರಿ ಕೊಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಸರ್ಕಾರೀ ಕೆಲಸಕ್ಕೆ ಬೇಡಿಕೆಯಿಟ್ಟಿದ್ದರು. ಇದಾದ ಬಳಿಕ ಹಲವು ಬಾರಿ ಮಾಧ್ಯಮಗಳ ಮುಂದೆ ಮನವಿ ಮಾಡಿದ್ದರು. ಇದೀಗ ಮತ್ತೊಮ್ಮೆ ಸರ್ಕಾರೀ ಕೆಲಸಕ್ಕೆ ಮನವಿ ಮಾಡಿದ್ದಾರೆ.