Publish Date: Mon, 04 Sep 2023 (10:52 IST)
Updated Date: Mon, 04 Sep 2023 (10:53 IST)
ಬೆಂಗಳೂರು : ನಾನು 5 ಬಾರಿ ಮರುಜನ್ಮ ಪಡೆದಿದ್ದೇನೆ, ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ಇವತ್ತು ನಿಮ್ಮ ಜೊತೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಘಾತಕಾರಿ ಅನುಭವಗಳನ್ನ ಹಂಚಿಕೊಂಡಿದ್ದಾರೆ.
ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ, ನನಗೆ ಪುನರ್ಜನ್ಮ ಬಂದಿದೆ. ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ಅಂದು ರಾತ್ರಿ 2 ಗಂಟೆ ವೇಳೆಗೆ ನನಗೆ ಎಚ್ಚರವಾಯ್ತು, ತಕ್ಷಣ ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ ಇಪ್ಪತ್ತೇ ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಆಕ್ಷಣದಲ್ಲಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ.
ಮುಂದುವರಿದು.. ನಾನಿಂದು ರಾಜಕೀಯ ಬಿಟ್ಟು ಕೆಲ ಮಾತನ್ನ ಮಾತನಾಡಬೇಕಿದೆ, ನನಗಾದ ಜೀವನ್ಮರಣದ ಹೋರಾಟದ ಬಗ್ಗೆ ಹೇಳಬೇಕಿದೆ. ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ, ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್ನಲ್ಲಿ ನಾವು ಚಿಕಿತ್ಸೆ ಪಡೆಯದೇ ಇದ್ರೇ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.