ಕರ್ನಾಟಕದಲ್ಲಿ ಮಳೆಯ ಅಬ್ಬರ ಕೊಂಚ ಇಳಿಮುಖವಾಗಿದ್ದರೂ ಇನ್ನೂ ಮಳೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇಂದಿನಿಂದ 2 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಕರ್ನಾಟಕದ ಬೆಂಗಳೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಚದುರಿದ ಮಳೆಯಾಗಬಹುದು. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಾಗಿರುವುದರಿಂದ ಮಳೆಯ ಅಬ್ಬರವೂ ಹೆಚ್ಚಾಗಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಇಂದಿನಿಂದ ಅಕ್ಟೋಬರ್ 24ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕಳೆದ 1 ವಾರದಿಂದ ಭಾರೀ ಮಳೆಯಾಗಿದ್ದರಿಂದ ರಾಜಕಾಲುವೆ, ತಗ್ಗು ಪ್ರದೇಶಕ್ಕೆ ನೀರು ತುಂಬಿಕೊಂಡಿತ್ತು. ಹಾಗಾಗಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.