ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶನಿವಾರವೂ ಉತ್ತಮ ಮಳೆ ಸುರಿದಿದೆ. ಮೊನ್ನೆಯಿಂದ ರಾತ್ರಿ ಹಗಲೆನ್ನದೇ ಸುರಿದ ಮಳೆಯಿಂದ ಶನಿವಾರ ಮತ್ತೆ ಕೆಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿವೆ, ಕಾಂಪೌಂಡ್ ಕುಸಿದಿದೆ, ಗುಡ್ಡ ಜರಿದಿವೆ. 2021ರ ಎಪ್ರಿಲ್ 1ರಿಂದ ಈವರೆಗೆ ಭಾಗಶಃ 410 ಮನೆಗಳಿಗೆ ಮತ್ತು 73 ಮನೆಗಳು ಸಂಪೂರ್ಣ ಹಾನಿಯಾಗಿದೆ. ಶನಿವಾರ ಮುಂಜಾನೆ ಮತ್ತು ಮಧ್ಯಾಹ್ನ ಉತ್ತಮ ಮಳೆಯಾಗಿದೆ ಉಳಿದಂತೆ ಮಳೆಯು ಬಿಡುವು ಪಡೆದುಕೊಂಡಿತ್ತು. ಆದರೆ ಮೋಡ ಕವಿದ ವಾತಾವರಣವಿತ್ತು. ಪಶ್ಚಿಮ ಘಟ್ಟ ಹಾಗೂ ತಪ್ಪಲು ಪ್ರದೇಶದಲ್ಲಿ ನಿರಂತರ ಮಳೆಯಾದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದೆ. ನೇತ್ರಾವತಿ ನದಿ ತಟದ ಹಲವು ಕಡೆ ನೆರೆಭೀತಿ ಆವರಿಸಿದೆ.