ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಾರ್ಚ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ₹3.48 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಕಳೆದ 30 ದಿನಗಳಲ್ಲಿ ಮಂತ್ರಾಲಯ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಕಾಣಿಕೆಯಲ್ಲಿ ₹ 3,39,35,121 ನೋಟು, 9,34,500 ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ.
ಮಾರ್ಚ್ 21ರಂದು ಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಂಡಿ ತೆರೆದು ಎಣಿಕೆ ಮಾಡಲಾಗಿದೆ. 37.200 ಗ್ರಾಂ ಚಿನ್ನ, 1280 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಎರಡು ದಿನಗಳಿಂದ ಮಂತ್ರಾಲಯ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗವಹಿಸಿದ್ದರು.
ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕೋಟ್ಯಾಂತರ ಭಕ್ತರಿದ್ದಾರೆ. ಎರಡೂ ರಾಜ್ಯಗಳು ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳ ಸಾಮಾನ್ಯ ಜನರು, ಗಣ್ಯರು ಮಠಕ್ಕೆ ಆಗಮಿಸುತ್ತಾರೆ.