ಹಾಸನ: ಬೇಲೂರಿನ ಭಾಗದ ಜನರ ನೆಮ್ಮದಿ ಕೆಡಿಸಿದ್ದ ಪುಂಡಾನೆಗಳ ಹಾವಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಇಂದು ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯುವ ಮೂಲಕ ಅಂತ್ಯಗೊಂಡಿದೆ.
ನಾಲ್ವರು ಕಾಡಾನೆ ದಾಳಿಯಿಂದ ಒಂದು ತಿಂಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಿತ್ತು. ಅದರಂತೆ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ, ವೈದ್ಯರುಗಳೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸೆರೆಹಿಡಿದ ಆನೆಗಳಲ್ಲಿ ಒಂದನ್ನು ಚಾಮರಾಜನಗರದ ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟರೆ, ಉಳಿದ ಎರಡು ಕಾಡಾನೆಗಳನ್ನು ಸಕ್ಕರೆಬೈಲು ಕ್ಯಾಂಪ್‍ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಬೇಲೂರಿನ ಕಾನನಹಳ್ಳಿ ಗ್ರಾಮದಿಂದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲ ದಿನದ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮಂಗಳವಾರದಿಂದ ವಿಕ್ರಾಂತ್ ಕಾಡಾನೆ ಸೆರೆ ಆರಂಭಿಸಿ, ನಿರಂತರ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ವಾಟೀಹಳ್ಳಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಯಿತು. ಇಂದು ಮುಂಜಾನೆ ಜನ-ಜಾನುವಾರುಗಳು, ಬೈಕ್‍ಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಮಕ್ನಾ ಕಾಡಾನೆಯನ್ನು ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮುಂಜಾನೆಯೇ ಇಟಿಎಫ್ ಸಿಬ್ಬಂದಿ ಮಕ್ನಾ ಕಾಡಾನೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಸಕಲೇಶಪುರದ ಹೆಬ್ಬನಹಳ್ಳಿ ಬಳಿಯಿಂದ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಅದನ್ನು ಸಕ್ಕರೆಬೈಲು ಆನೆ ಶಿಬಿರಕ್ಕೆ ಕೊಂಡೊಯ್ಯಲಾಯಿತು.