Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ: ಆರ್.ಅಶೋಕ್

R Ashok

Krishnaveni K

ಬೆಂಗಳೂರು , ಶುಕ್ರವಾರ, 24 ಮೇ 2024 (15:26 IST)
ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹೋಗಿ ಫೋಟೊ ಷೋ ಮಾಡುವುದು ಬಿಟ್ಟರೆ ಬೇರೇನೂ ಕೆಲಸ ಆಗುತ್ತಿಲ್ಲ. ಕಮಿಷನರ್ ಅವರು ಮಳೆಗೆ ಸಂಬಂಧಿಸಿ ಎಲ್ಲ ಮಾಡಿದ್ದಾಗಿ ಒಂದು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಪಾಲಿಕೆ ಎಲ್ಲ ಸಿದ್ಧತೆ ಮಾಡಿದ್ದರೆ ಸಿಎಂ ಸ್ಥಳ ಭೇಟಿ ಮಾಡುವ ಪ್ರಮೇಯ ಯಾಕೆ ಬಂತು ಎಂದು ಕೇಳಿದರು.

ರಾಜ್ಯ ಸರಕಾರ ಪಾಪರ್ ಆಗಿದೆಯೇ? ಹಿಂದೆ ಯಡಿಯೂರಪ್ಪ ಅವರು ಒಂದು ವರ್ಷದಲ್ಲಿ 7 ಸಾವಿರ ಕೋಟಿ ವಿಶೇಷ ಅನುದಾನ ನೀಡಿದ್ದರು. ಬಸವರಾಜ ಬೊಮ್ಮಾಯಿಯವರು 6,700 ಕೋಟಿ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ಸಿನ ಯೋಗ್ಯತೆಗೆ ಎಷ್ಟು ಬಿಡುಗಡೆ ಮಾಡಿದ್ದಾರೆಂದು ಹೇಳಲಿ ಎಂದು ಸವಾಲೆಸೆದರು. ರಾಜಕಾಲುವೆ ಸರಿಪಡಿಸಲು, ಲಕ್ಷಾಂತರ ಹೊಂಡಗುಂಡಿ ಸರಿಪಡಿಸಲು ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಣ ಇಲ್ಲದೆ ಗುತ್ತಿಗೆದಾರರು ಆತ್ಮಹತ್ಯೆಗೆ ಮುಂದಾಗಿದ್ದರು. ಕಮಿಷನ್ ಆಪಾದನೆ ಮಾಡಿದ್ದರು. ಈ ಸ್ಥಿತಿಯಲ್ಲಿ ರಾಜ್ಯ ಸರಕಾರದ ಪಾತ್ರ ಏನು ಎಂದು ಕೇಳಿದರು. ರಾಜ್ಯ ಸರಕಾರ ಎಷ್ಟು ಹಣ ಬಿಡುಗಡೆ ಮಾಡಲಿದೆ? ಯಾವಾಗ ಹೊಂಡಗುಂಡಿ ಮುಚ್ಚುತ್ತೀರಿ? ಎಂದ ಅವರು, ಕುಡಿಯುವ ನೀರಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗಿದೆ ಎಂದು ಹೇಳಿದರು.

ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎಷ್ಟು ಹಣ ನೀಡಿದ್ದೀರಿ? ಲೆಕ್ಕ ಕೊಡಿ ಕಾಂಗ್ರೆಸ್ಸಿನವರೇ ಎಂದು ಕೇಳಿದರು. ಬಿಲ್ ಸಿಗದೆ ಕಸ ತೆಗೆಯುವವರು ಸಮಸ್ಯೆಯಲ್ಲಿದ್ದಾರೆ. ರಾಶಿ ರಾಶಿ ಕಸ ಬಿದ್ದಿದೆ. ಬೆಂಗಳೂರಿನ ತೆರಿಗೆ ನಮ್ಮ ಹಕ್ಕು ಎಂದು ಇಲ್ಲಿನ ಜನರೂ ಕೇಳುತ್ತಿದ್ದಾರೆ ಎಂದು ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಇದೆಯಾ ಸತ್ತು ಹೋಗಿದೆಯಾ ಎಂದು ಪ್ರಶ್ನೆ ಮುಂದಿಟ್ಟ ಅವರು, ಸರಕಾರ ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು. ಇದರ ವಿರುದ್ಧ ಇದೇ 28ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಡೊಂಬಿವಿಲಿಯ ಕೆಮಿಕಲ್‌ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 10ಕ್ಕೆ ಏರಿಕೆ, ಇಬ್ಬರು ನಾಪತ್ತೆ