Publish Date: Tue, 03 Mar 2026 (16:04 IST)
Updated Date: Tue, 03 Mar 2026 (16:06 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಶಾಸಕರು, ಸಚಿವರು ಶ್ರೀಮಂತರು ಗ್ಯಾರಂಟಿ ಯೋಜನೆಯನ್ನು ತಾವಾಗಿಯೇ ತ್ಯಜಿಸಬೇಕು ಎನ್ನುತ್ತಿದ್ದಾರೆ. ಇದನ್ನು ಉಲ್ಲೇಖಿಸಿ ಟೀಕಿಸಿರುವ ಅವರು ಎಲ್ಲರಿಗೂ ಫ್ರೀ ಎಂದು ಅಧಿಕಾರಕ್ಕೆ ಬಂದವರು ಈಗ ಶ್ರೀಮಂತರು ಬಿಡಿ ಎಂದರೆ ಹೇಗೆ ಎಂದಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯ ಸರ್ಕಾರ ಎಷ್ಟು ಸಾಲ ಮಾಡಿದೆ ಎಂದು ವಿವರಿಸಿರುವ ಅವರು ಪ್ರತೀ ವ್ಯಕ್ತಿಯೂ ಈಗ 1 ಲಕ್ಷ ರೂ. ಸಾಲ ಹೊರಬೇಕಾಗಿದೆ ಎಂದಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ. ಕಳೆದ ಮೂರು ಬಜೆಟ್‌ನಲ್ಲಿ ಅನುದಾನ ಘೋಷಣೆಯಾಯಿತೇ ವಿನಃ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳನ್ನು ಮೀರಿ ಸಿದ್ದರಾಮಯ್ಯ ಸಾಲ ಮಾಡಿದ್ದು, ಅವಧಿ ಮುಗಿಯುವ ವೇಳೆಗೆ ಸಾಲದ ಪ್ರಮಾಣ ₹6 ಲಕ್ಷ ಕೋಟಿಗೆ ತಲುಪಲಿದೆ. ಪ್ರತಿ ವ್ಯಕ್ತಿಯ ಮೇಲೆ ₹1 ಲಕ್ಷ ಸಾಲ ಇರಲಿದೆ. ಇಂತಹ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದಾರೆ.