Publish Date: Mon, 02 Mar 2026 (17:09 IST)
Updated Date: Mon, 02 Mar 2026 (17:14 IST)
ಮೈಸೂರು: ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡಿದಿದೆ. ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆಯರಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಕದ್ದಾಲಿಕೆ ಆಗಲೂ ಇತ್ತು, ಈಗಲೂ ಇದೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೊಮ್ಮೆ ವಿಷಯಗಳು ಹೊರಗೆ ಬಂದು ಕೆಲವರ ತಲೆ ಉರುಳುತ್ತವೆ. ಇವತ್ತಿನ ಸರ್ಕಾರದಲ್ಲಿ ಅದು ಎಷ್ಟು ಜಾಸ್ತಿಯಾಗಿದೆ ಎಂದು ಅವರನ್ನೇ ಕೇಳಬೇಕು ಎಂದರು.
ಮುಖ್ಯಮಂತ್ರಿಯದ್ದು ಒಂದು ಗುಂಪು, ಮುಖ್ಯಮಂತ್ರಿ ಆಗಬೇಕು ಎಂದುಕೊಂಡವರದ್ದು ಒಂದು ಗುಂಪು ಪರಸ್ಪರ ಗೂಢಚಾರಿಕೆ ನಡೆಸುತ್ತಿರುವುದು ದುರಂತ ಎಂದು ಹೇಳಿದರು.
ಇನ್ನೂ ಗಲ್ಫ್ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರೂ ಸೇರಿದಂತೆ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಕ್ರಮ ವಹಿಸುತ್ತಿದೆ . ವಿಮಾನಗಳ ಹಾರಾಟ ಸ್ಥಗಿತಗೊಂಡ ಸಮಸ್ಯೆ ಆಗಿದೆ. ದುಬೈನಲ್ಲಿರುವ ಕನ್ನಡಿಗರು ಪ್ರವಾಸಿ ಕನ್ನಡಿಗರ ಸಹಾಯಕ್ಕೆ ಬಂದಿದ್ದಾರೆ ಎಂದರು.