Daily Horoscope

Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ಸಾಲದ ಬಗ್ಗೆ ಹೇಳಿದ ಸಿಎಂ ಸಿದ್ದರಾಮಯ್ಯಗೆ ಅಂಕಿ ಅಂಶ ಸಮೇತ ತಿರುಗೇಟು ನೀಡಿದ ಅಶೋಕ್

R Ashoka
ಬೆಂಗಳೂರು: ಮೋದಿ ಪ್ರಧಾನಿಯಾದ ಮೇಲೆ ಕೇಂದ್ರ ಸರ್ಕಾರ 165 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಸದನದಲ್ಲಿ ಹೇಳಿದ ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಸೋಷಿಯಲ್ ಮೀಡಿಯಾದಲ್ಲಿ ಅಂಕಿ ಅಂಶ ಸಮೇತ ತಿರುಗೇಟು ನೀಡಿದ್ದಾರೆ.

ಸದನದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರದ ಸಾಲದ ಬಗ್ಗೆ ವಿವರಣೆ ನೀಡಿದ್ದಾರೆ. ನಾವು ಸಾಲ ತಗೊಂಡಿಲ್ಲ ಅಂತ ಹೇಳಲ್ಲ. ನಾವು 8,24,369 ಕೋಟಿ ರೂ ಸಾಲ ತಗೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಎಷ್ಟು ಸಾಲ ತಗೊಂಡಿದೆ ಗೊತ್ತಾ? 2014 ರಲ್ಲಿ ಕೇಂದ್ರದ ಸಾಲ 53.11 ಲಕ್ಷ ಕೋಟಿ ಇತ್ತು. ಮೋದಿ ಪ್ರಧಾನಿ ಆದ ಮೇಲೆ 165 ಲಕ್ಷ ಕೋಟಿ ರೂ. ಸಾಲ ತಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ ‘ಸಾಲ ಮಾಡುವುದು ತಪ್ಪಲ್ಲ. ಆದರೆ ಆ ಸಾಲವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಲದ ದೊಡ್ಡ ಭಾಗ ಬಂಡವಾಳ ವೆಚ್ಚಕ್ಕೆ (Capital Expenditure) ಹೋಗುತ್ತಿದೆ. ಇಂದು ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ ಸುಮಾರು ₹12.2 ಲಕ್ಷ ಕೋಟಿ, ಅಂದರೆ GDP ಯ ಸುಮಾರು 3.1%, ಮತ್ತು ಒಟ್ಟು ಸರ್ಕಾರಿ ವೆಚ್ಚದ ಸುಮಾರು 22–23%.
ಅಂದರೆ ಕೇಂದ್ರ ಸರ್ಕಾರ ತಾನು ಮಾಡಿದ ಸಾಲವನ್ನು ಮುಖ್ಯವಾಗಿ ರಸ್ತೆಗಳು, ರೈಲು ಮಾರ್ಗಗಳು, ಮೂಲಸೌಕರ್ಯ ಹಾಗೂ ದೀರ್ಘಕಾಲಿಕ ಆರ್ಥಿಕ ಸಾಮರ್ಥ್ಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ಆದರೆ ತಮ್ಮ ಸರ್ಕಾರದ ಅಂಕಿ-ಅಂಶಗಳು ರಾಜ್ಯವನ್ನು ಬೆಚ್ಚಿಬೀಳಿಸುವಂತಿವೆ. ತಾವು ಮಂಡಿಸಿದ 2026–27ರ ಕರ್ನಾಟಕ ರಾಜ್ಯ ಬಜೆಟ್‌ನ ಒಟ್ಟು ಗಾತ್ರ ₹4.48 ಲಕ್ಷ ಕೋಟಿ ಇದ್ದರೂ, ಅದರಲ್ಲಿ ಬಂಡವಾಳ ವೆಚ್ಚ ಕೇವಲ ₹74,682 ಕೋಟಿ ಮಾತ್ರ. ಅಂದರೆ ಇದು ಒಟ್ಟು ವೆಚ್ಚದ ಸುಮಾರು 16–17% ಮಾತ್ರ, ಮತ್ತು GSDP ಯ ಕೇವಲ 2.2–2.5%.

ಇದರ ಜೊತೆಗೆ ರಾಜ್ಯದ ಒಟ್ಟು ಸಾಲ ಈಗಾಗಲೇ ₹8.24 ಲಕ್ಷ ಕೋಟಿ (GSDP ಯ ಸರಿಸುಮಾರು 25%) ಮುಟ್ಟಿದೆ. ಈ ವರ್ಷ ಒಂದರಲ್ಲೇ ₹1.32 ಲಕ್ಷ ಕೋಟಿ ಹೊಸ ಸಾಲ ತೆಗೆದುಕೊಳ್ಳಲಾಗುತ್ತಿದೆ.

ಇನ್ನೂ ಮುಖ್ಯವಾಗಿ, ₹22,957 ಕೋಟಿ ರಾಜಸ್ವ ಕೊರತೆ ಇದೆ. ರಾಜಸ್ವ ಕೊರತೆ ಎಂದರೆ ರಾಜ್ಯ ಸರ್ಕಾರ ತನ್ನ ದಿನನಿತ್ಯದ ಆಡಳಿತಾತ್ಮಕ ಖರ್ಚುಗಳನ್ನು ಪೂರೈಸಲು ಕೂಡ ಸಾಲ ತೆಗೆದುಕೊಳ್ಳಬೇಕಾಗಿರುವುದು. ಅಂದರೆ ಸಾಲದ ಒಂದು ದೊಡ್ಡ ಭಾಗ ಮೂಲಸೌಕರ್ಯ ನಿರ್ಮಾಣಕ್ಕೆ ಅಲ್ಲ, ದಿನನಿತ್ಯದ ವೆಚ್ಚಗಳಿಗೆ ಹೋಗುತ್ತಿದೆ ಎಂಬುದೇ ಅರ್ಥ.

ಹೀಗಾಗಿ ವ್ಯತ್ಯಾಸ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸಾಲ ತೆಗೆದುಕೊಂಡು ಉತ್ಪಾದಕ ಆಸ್ತಿಗಳನ್ನು ನಿರ್ಮಿಸುತ್ತದೆ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಆದರೆ ನಿಮ್ಮ ಸರ್ಕಾರದ ಬಜೆಟ್ ನೋಡಿದರೆ, ಸಾಲದ ಒಂದು ದೊಡ್ಡ ಭಾಗ ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ ಹೋಗುತ್ತಿದೆ. ಹೀಗಾಗಿ ಪ್ರಶ್ನೆ ಇರುವುದು ಸಾಲದ ಪ್ರಮಾಣದ ಬಗ್ಗೆ ಅಲ್ಲ. ಸಾಲದ ಬಳಕೆಯ ಗುಣಮಟ್ಟದ ಬಗ್ಗೆ. ತೆಗೆದುಕೊಂಡ ಸಾಲ ಯಾವುದಕ್ಕೆ ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ.

ಮೂಲಸೌಕರ್ಯ ನಿರ್ಮಿಸಲು ಮಾಡಿದ ಸಾಲವು ಭವಿಷ್ಯದ ಆರ್ಥಿಕ ಶಕ್ತಿಯನ್ನು ನಿರ್ಮಿಸುತ್ತದೆ. ದಿನನಿತ್ಯದ ವೆಚ್ಚಗಳಿಗೆ ತೆಗೆದ ಸಾಲವು ಕನ್ನಡಿಗರ ಸಾಲದ ಭಾರವನ್ನು ಮಾತ್ರ ಹೆಚ್ಚಿಸುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಕಾರಣಕ್ಕೆ ದಿಢೀರ್‌ ಕೇರಳ ಪ್ರವಾಸವನ್ನೇ ರದ್ದು ಗೊಳಿಸಿದ ರಾಹುಲ್ ಗಾಂಧಿ