Select Your Language

Notifications

webdunia
webdunia
webdunia
webdunia

ವಿಧಾನಸಭೆ ವಿಸರ್ಜನೆ ಮಾಡಿದ್ರೆ ಕಾಕಾಪಾಟೀಲನೂ ನಿಮ್ಮ ಹಿಂದೆ ಬರಲ್ಲ: ಆರ್ ಅಶೋಕ್

R Ashok

Krishnaveni K

ಬೆಂಗಳೂರು , ಗುರುವಾರ, 26 ಸೆಪ್ಟಂಬರ್ 2024 (14:00 IST)
ಬೆಂಗಳೂರು: ವಿಧಾನಸಭೆ ವಿಸರ್ಜನೆ ಮಾಡಿ ತಮ್ಮ ಹಿಂದೆ ರಾಜ್ಯದ ಜನರಿದ್ದಾರೆ ಎಂದು ತೋರಿಸಿಕೊಟ್ಟರೆ ಬಿಜೆಪಿ ನಿಮ್ಮ ವಿರುದ್ಧ ಪ್ರತಿಭಟನೆಯನ್ನೇ ಮಾಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಸಿದ್ದರಾಮ್ಯನವರೇ ನೀವು ವಿಧಾನಸಭೆ ವಿಸರ್ಜನೆಗೆ ಮುಂದಾದರೆ ಕಾಂಗ್ರೆಸ್ಸಿನ 136 ಶಾಸಕರ ಪೈಕಿ 135 ಜನ ಶಾಸಕರೂ ನಿಮ್ಮ ಜೊತೆ ಇರುವುದಿಲ್ಲ. ಜಮೀರ್, ಮಹದೇವಪ್ಪ, ಕಾಕಾ ಪಾಟೀಲ್ ಕೂಡ ಇರುವುದಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ಲೂಟಿ, ಭ್ರಷ್ಟಾಚಾರ ಮಿತಿ ಮೀರಿದೆ. ಈ ಸರಕಾರಕ್ಕೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಮಾಡಲು ಅಧಿಕಾರ, ಯೋಗ್ಯತೆ ಇಲ್ಲ ಎಂದ ಅವರು, ರಾಜೀನಾಮೆ ಕೊಡುವುದೊಂದೇ ನಿಮ್ಮ ಮುಂದಿನ ದಾರಿ ಎಂದು ಸಲಹೆ ನೀಡಿದರು.

ಇವತ್ತು ಎಫ್‍ಐಆರ್ ಕೂಡ ಆಗಲಿದೆ. ಇನ್ಯಾತಕ್ಕೆ ಕಾಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಹೈಕೋರ್ಟ್ ಆದೇಶ ಬಂದಿದೆ. ಜನಪ್ರತಿನಿಧಿಗಳ ಕೋರ್ಟಿನ ಆದೇಶವೂ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ಬಿಟ್ಟು ಬೇರೇನು ಮಾಡಲೂ ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು ತನಿಖೆ ಮೇಲೆ ಪ್ರಭಾವ ಬೀರುತ್ತಾರೆಂದು ಹೇಳಿದ್ದಿರಲ್ಲವೇ? ಎಂದು ಕೇಳಿದರು. ನಿಷ್ಪಕ್ಷಪಾತ ತನಿಖೆ ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಇದು ಕೂಡ ಭ್ರಷ್ಟಾಚಾರದ ಕೇಸ್ ಎಂದು ಗಮನ ಸೆಳೆದರು.

ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ದುರ್ಬಲ- ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ಸಿಗರು ಮತ್ತು ಸಿದ್ದರಾಮಯ್ಯನವರು ಕರ್ನಾಟಕವನ್ನು ಎಟಿಎಂ ಮಾಡಿ ತಮ್ಮನ್ನು ತಾವು ಹಾಳು ಮಾಡಿಕೊಂಡರು ಎಂದು ನುಡಿದರು. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಮೂಲಕ ರಾಷ್ಟ್ರದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕುತ್ತಿದೆ ಎಂದು ಟೀಕಿಸಿದರು.

ರಾಜೀನಾಮೆ ಕೊಡುವ ಮೂಲಕ ಅಲ್ಪಸ್ವಲ್ವ ಗೌರವವನ್ನು ಉಳಿಸಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು. ಮೊನ್ನೆ ಹೈಕೋರ್ಟ್ ಆದೇಶ ಬಂದ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿಮ್ಮ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ದುರ್ಬಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಕೇಜ್ರಿವಾಲ್ ಫೋನ್ ಹಾಕಿರ್ಬೇಕು: ನಟ, ಸಂಸದ ಜಗ್ಗೇಶ್ ವ್ಯಂಗ್ಯ