ಬೆಂಗಳೂರು : ಒಂದೆಡೆ ರಾಜ್ಯದಲ್ಲಿ ಉಭಯ ಸದನಗಳ ಕಲಾಪ ನಡೆಯುತ್ತಿದ್ದರೇ, ವಿಪಕ್ಷಗಳು ಆಡಳಿತ ಪಕ್ಷವನ್ನು ಸದನದಲ್ಲಿ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಿಢೀರ್ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಹೌದು.. ಸದನದಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡೋದಕ್ಕಾಗಿ, ಇಂದು ನಡೆದಂತ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದೇ ಶಾಸಕರು ಸದನದಲ್ಲಿ ಹಾಜರಿದ್ದು, ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂಬುದಾಗಿ ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದಂತ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇನ್ನೂ ನಾಲ್ಕು ದಿನ ಕಲಾಪ ಉಳಿದಿದೆ. ನಾಲ್ಕು ದಿನವೂ ಶಾಸಕರು ಕಲಾಪದಲ್ಲಿ ಹಾಜರಿದ್ದು, ಪ್ರಮುಖ ವಿಧೇಯಕಗಳ ಚರ್ಚೆ ವೇಳೆ ಉಪಸ್ಥಿತರಾಗಿ, ಪ್ರತಿಪಕ್ಷಗಳ ಆರೋಪಗಳಿಗೆ ಸಚಿವರು ಉತ್ತರ ನೀಡುವಾಗ ಸಮರ್ಥನೆಗಾಗಿ ನಿಲ್ಲಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿದ್ದರು.