ರಾಜ್ಯದಲ್ಲಿ ಒಟ್ಟು 5000 ಹೊಸ ಬಸ್ ಖರೀದಿ ಮಾಡಲಾಗುತ್ತಿದ್ದು, ಅದರಲ್ಲಿ ಉತ್ತರ ಕರ್ನಾಟಕಕ್ಕೆ 884 ಹೊಸ ಬಸ್ ನೀಡಲಾಗುತ್ತಿದೆ. ಈಗಾಗಲೇ 375 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಫೆಬ್ರವರಿ ವೇಳೆಗೆ ಹೊಸ ಬಸ್‌ಗಳು ವಾಯವ್ಯ ಸಾರಿಗೆ ಸಂಸ್ಥೆಯನ್ನು ಸೇರಲಿವೆ. ಉಳಿದ ಬಸ್‌ಗಳನ್ನು ಹಂತ ಹಂತವಾಗಿ ಖರೀದಿಸಿದ ನಂತರ ಉತ್ತರ ಕರ್ನಾಟಕಕ್ಕೆ ನೀಡಲಾಗುತ್ತದೆ. ಈ ಭಾಗದ ಜನರಿಗೆ ಹಳೆ ಬಸ್‌ಗಳನ್ನು ಕೊಡದೇ ಬ್ರ್ಯಾಂಡ್ ಹೊಸ ಬಸ್ ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.