ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲವು ಕನ್ನಡ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ಬಂದ್ ಮಾಡಿ ನಮ್ಮ ಹೊಟ್ಟೆಗೆ ಹೊಡೆಯೋದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಇತ್ತೀಚೆಗೆ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆಯಾಗಿತ್ತು. ಈ ವಿಚಾರ ಎರಡೂ ರಾಜ್ಯಗಳ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಇದರ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು.
ಇದೀಗ ಕನ್ನಡ ಸಂಘಟನೆಗಳು ಇದೇ ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಯಾವ ಪುರುಷಾರ್ಥಕ್ಕೆ ಈ ಬಂದ್ ಮಾಡುತ್ತೀರಿ? ಕರ್ನಾಟಕ ಬಂದ್ ಮಾಡಿ ನಿತ್ಯ ಕಸುಬು ನಂಬಿ ಜೀವನ ಮಾಡುವ ಕನ್ನಡಿಗರ ಹೊಟ್ಟೆಗೆ ಹೊಡೆದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕ ಬಂದ್ ಗಳೆಲ್ಲಾ ಹೆಚ್ಚು ಯಶಸ್ವಿಯಾಗುವುದಿಲ್ಲ. ಇದೂ ಯಶಸ್ವಿಯಾಗಲ್ಲ? ನಾವು ದಿನ ಕೂಲಿ ಮಾಡಿ ಬದುಕುವವರು. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ್ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಹಲವರು ಕಿಡಿ ಕಾರಿದ್ದಾರೆ.