ಬೆಂಗಳೂರು: ಒಂದೆಡೆ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಇದು ಸಾಕಷ್ಟು ಚರ್ಚೆಯಾಗುತ್ತಿದ್ದು ಕೆಲವರು ಹಾಗಿದ್ದರೆ ವಿಧಾನಸಭೆಯಲ್ಲಿ 136 ಸೀಟು ಬಂದಾಗಲೂ ಮತಗಳ್ಳತನ ಆಗಿರಬಹುದೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕೆಲವು ಮತ ಕ್ಷೇತ್ರಗಳು ಸೇರಿದಂತೆ ದೇಶದಾದ್ಯಂತ ಹಲವು ಕಡೆ ನಕಲಿ ಮತದಾರರು ವೋಟ್ ಮಾಡಿದ್ದಾರೆ. ಅದಕ್ಕೇ ಬಿಜೆಪಿ ಗೆದ್ದಿದೆ ಎಂದು ನಿನ್ನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು.
ಈ ವಿಚಾರ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಹಾಗಿದ್ದರೆ ವಿಧಾನಸಭೆ ಚುನಾವಣೆಯಲ್ಲೂ ಕಳ್ಳ ವೋಟ್ ಹಾಕಿರಬಹುದು. ಹೀಗಾಗಿಯೇ 136 ಸೀಟು ನೀವು ಗೆದ್ದಿದ್ದಾ ಎಂದು ಕಾಂಗ್ರೆಸ್ ಗೇ ಟಾಂಗ್ ಕೊಟ್ಟಿದ್ದಾರೆ.
ಇನ್ನು, ಕೆಲವರು ಒಂದು ವೇಳೆ ನಕಲಿ ಮತದಾರರಿದ್ದರೆ ಅವರೆಲ್ಲಾ ಬಿಜೆಪಿಗೇ ವೋಟ್ ಹಾಕಿದ್ದಾರೆ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ನಿಮ್ಮ ಆರೋಪಕ್ಕೆ ಸಾಕ್ಷ್ಯಗಳಿದ್ದರೆ ಇದು ಗಂಭೀರವಾದ ವಿಚಾರ. ಇದನ್ನು ಕೋರ್ಟ್ ಗೆ ಸಲ್ಲಿಸಿ ಕಾನೂನು ರೀತಿಯಲ್ಲಿ ಹೋರಾಟ ಮಾಡಿ. ಅದು ಬಿಟ್ಟು ಸಮಾವೇಶ ಮಾಡಿ ಏನು ಪ್ರಯೋಜನ ಎಂದೂ ಸಾರ್ವಜನಿಕರು ಸಲಹೆ ನೀಡಿದ್ದಾರೆ.