ಬೆಂಗಳೂರು: ಜಾತಿಗಣತಿಗಾಗಿ ಸರ್ಕಾರಿ ಶಾಲೆ ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೂ ವಿಸ್ತರಿಸಲಾಗಿದೆ. ಆದರೆ ಇದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗಾದ್ರೆ ಮಕ್ಕಳ ಪಠ್ಯ ಸಮಯಕ್ಕೆ ಸರಿಯಾಗಿ ಮುಗಿಯುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಸರ್ಕಾರೀ ಶಾಲೆಗಳಿಗೆ ಸೆಪ್ಟೆಂಬರ್ 22 ರಿಂದ ದಸರಾ ರಜೆ ಘೋಷಿಸಲಾಗಿತ್ತು. ಅಕ್ಟೋಬರ್ 8 ಕ್ಕೆ ಶಾಲೆಗಳು ಮರಳಿ ತೆರೆಯಲಾಗುವುದು ಎಂದು ಈ ಮೊದಲು ಹೇಳಲಾಗಿತ್ತು. ಅದೇ ಅವಧಿಯಲ್ಲಿ ಶಿಕ್ಷಕರನ್ನು ಜಾತಿಗಣತಿ ಸಮೀಕ್ಷೆಗೆ ಬಳಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು.
ಆದರೆ ಈಗ ನಿಗದಿತ ಸಮಯಕ್ಕೆ ಸಮೀಕ್ಷೆ ಮುಗಿದಿಲ್ಲ. ಹೀಗಾಗಿ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ. ಇದರಿಂದಾಗಿ ಶಾಲೆಗಳ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಗಿದೆ. ಇದಾದ ಬಳಿಕವೂ ಶಾಲೆ ಆರಂಭವಾಗಲ್ಲ. ಯಾಕೆಂದರೆ ಅದಾದ ಬಳಿಕ ದೀಪಾವಳಿ ನಿಮಿತ್ತ ಮೂರು ದಿನ ರಜೆ. ಇದೆಲ್ಲಾ ಆಗಿ ಶಾಲೆ ಪುನರಾರಂಭವಾಗುವಷ್ಟರ ಹೊತ್ತಿಗೆ ರಜೆ ಒಂದು ತಿಂಗಳಾಗಿರುತ್ತದೆ.
ಹೀಗಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಸ್ಕೂಲ್ ಮಕ್ಕಳಿಗೆ ಇದರಿಂದ ತುಂಬಾ ತೊಂದರೆಯಾಗಲಿದೆ. ಒಂಭತ್ತು ಮತ್ತು 10 ನೇ ತರಗತಿಯವರಿಗೆ ಪಾಠ ಮುಗಿಯದೇ ಇದ್ದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಏನೋ ಸ್ಪೆಷಲ್ ಕ್ಲಾಸ್ ಮಾಡುತ್ತೇವೆ ಎಂದಿದ್ದಾರೆ. ಆದರೆ ಏನೇ ಆದರೂ ಇದರ ಹೊರೆ ಬೀಳುವುದು ಮಕ್ಕಳ ಮೇಲೆ ಎನ್ನುವುದಂತೂ ಸತ್ಯ. ಹೀಗಾಗಿ ಈ ಜಾತಿ ಗಣತಿಯನ್ನು ಬೇಸಿಗೆ ರಜೆಯಲ್ಲಿ ನಡೆಸಬಹುದಿತ್ತು. ಅದು ಬಿಟ್ಟು ಮಕ್ಕಳಿಗೆ ಅತೀ ಮುಖ್ಯವಾದ ಮಧ್ಯಾವಧಿ ಸಮಯದಲ್ಲಿ ಯಾಕೆ ಮಾಡಿದ್ರು ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.