ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ತಮ್ಮ ರಾಜೀನಾಮೆಗೆ ಒತ್ತಡ ಹಾಕುತ್ತಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟಿದ್ದಾರೆ.
ಯಾರೆಷ್ಟೇ ಕೂಗಾಡಿದರೂ, ಚೀರಾಡಿದರೂ ಬಟ್ಟೆ ಹರ್ಕೊಂಡ್ರೂ ಸರಿಯೇ ನಾನು ರಾಜೀನಾಮೆ ಕೊಡಲ್ಲ ಅಂದ್ರೆ ಕೊಡಲ್ಲ ಎಂದು ಪ್ರಿಯಾಂಕ್ ಖರ್ಗೆ ಖಡಾಖಂಡಿತವಾಗಿ ಹೇಳಿದ್ದಾರೆ. ನನ್ನ ವಿರುದ್ಧ ಆರೋಪಕ್ಕೆ ದಾಖಲೆ ಇದ್ದರೆ ಕೊಡಲಿ ಎಂದು ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರು ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ರಾಜು ಕಾಂಗ್ರೆಸ್ ಸೇರುವ ಮೊದಲು ಬಿಜೆಪಿಯಲ್ಲಿದ್ದವರು ಎಂದು ಪ್ರಿಯಾಂಕ್ ಹೇಳಿದ್ದಾರೆ.
ನನ್ನ ರಾಜೀನಾಮೆ ಕೇಳಲು ವಿಜಯೇಂದ್ರ ಸುಪ್ರೀಂಕೋರ್ಟಾ? ವಿಜಯೇಂದ್ರ ವಿರುದ್ಧವೂ ಮನಿ ಲ್ಯಾಂಡರಿಂಗ್ ಪ್ರಕರಣವಿದೆ. ಅವರು ರಾಜೀನಾಮೆ ಕೊಟ್ಟರಾ? ಕಲಬುರಗಿಗೆ ಮುತ್ತಿಗೆ ಹಾಕಲು ಎಷ್ಟು ಜನ ಬರುತ್ತೀರಿ ಎಂದು ಹೇಳಿ, ಅಷ್ಟು ಜನಕ್ಕೆ ಟೀ ವ್ಯವಸ್ಥೆ ಮಾಡುತ್ತೇವೆ ಎಂದೂ ಪ್ರಿಯಾಂಕ್ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಯಲ್ಲೇ ವಿಜಯೇಂದ್ರ ಮಾತಿಗೆ ಬೆಲೆಯಿಲ್ಲ. ಇನ್ನು ನಾವ್ಯಾಕೆ ಬೆಲೆ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ. ಡಿಸೆಂಬರ್ 27 ರಂದು ಗುತ್ತಿಗೆದಾರ ಸಚಿನ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮೊದಲು ಡೆತ್ ನೋಟ್ ಬರೆದಿದ್ದು ಇದರಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಮೇಲೆ ಆರೋಪ ಮಾಡಿದ್ದಾರೆ.