ಬೆಂಗಳೂರು: ರಾಜ್ಯದಲ್ಲಿ ಬಲ ಕಳೆದುಕೊಂಡಿರುವ ಜೆಡಿಎಸ್ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ರಾಜ್ಯಾಧ್ಯಕ್ಷ ಪಟ್ಟಕಟ್ಟಲು ಸಿದ್ಧತೆ ನಡೆಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಪುತ್ರನನ್ನು ನಿಲ್ಲಿಸಿ ಕುಮಾರಸ್ವಾಮಿ ರಾಜ್ಯಾಧ್ಯಕ್ ಪಟ್ಟ ಕಟ್ಟು ಕನಸು ಹೊತ್ತಿದ್ದರು. ಹಾಗಿದ್ದರೂ ನಿಖಿಲ್ ಸೋತಿದ್ದು ಕುಮಾರಸ್ವಾಮಿಗೆ ಆಘಾತ ನೀಡಿತ್ತು.
ಈ ಸೋಲು ಕೇವಲ ಕುಮಾರಸ್ವಾಮಿಗೆ ಮಾತ್ರವಲ್ಲ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೇ ಹಿನ್ನಡೆ ಉಂಟು ಮಾಡಿತ್ತು. ಹೀಗಾಗಿ ಈಗ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿಗೆ ಪಟ್ಟ ಕಟ್ಟಲು ತೀರ್ಮಾನಿಸಿದ್ದಾರೆ.
ಫೆಬ್ರವರಿಯಲ್ಲಿ ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಯಿದೆ. ಅವರ ಜೊತೆಗೆ ಹಳೆಯ ಮುಖಗಳನ್ನು ಬದಿಗಿಟ್ಟು ಕೆಲವು ಯುವಕರನ್ನು ಪಕ್ಷದ ಪ್ರಮುಖ ಸ್ಥಾನಕ್ಕೆ ನೇಮಿಸಿ ಜೆಡಿಎಸ್ ಹೊಸ ರೂಪ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ. ಮುಂದಿನ ರಾಜ್ಯ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಹೊಸ ರೂಪದೊಂದಿಗೆ ಕಣಕ್ಕಿಳಿಸಬೇಕು ಎನ್ನುವುದು ಕುಮಾರಸ್ವಾಮಿ ಯೋಜನೆ. ಸದ್ಯಕ್ಕೆ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು ರಾಜ್ಯದ ಕಡೆಗೆ ಗಮನ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಜೆಡಿಎಸ್ ಹೊಣೆ ನಿಖಿಲ್ ಹೆಗಲಿಗೇರಲಿದೆ.