Select Your Language

Notifications

webdunia
webdunia
webdunia
webdunia

10ನೇ ತರಗತಿ ಪರೀಕ್ಷೆಗೆ ಸಕಲ ಸಿದ್ಧತೆ: ಬಿ.ಸಿ. ನಾಗೇಶ್

10ನೇ ತರಗತಿ ಪರೀಕ್ಷೆಗೆ ಸಕಲ ಸಿದ್ಧತೆ: ಬಿ.ಸಿ. ನಾಗೇಶ್
bangalore , ಭಾನುವಾರ, 27 ಮಾರ್ಚ್ 2022 (20:24 IST)
ಕೋವಿಡ್-19 ಪೂರ್ವದಂತೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು. 
 
ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿರುವ ಬಾಲಕರ ಸರಕಾರಿ 
ಪ. ಭಾ. ಪದವಿ ಪೂರ್ವ ಕಾಲೇಜು, ಪ್ರೌಢ ಶಿಕ್ಷಣ ವಿಭಾಗದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, '8.73 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಪುನರಾವರ್ತಿತ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಕೂಡ ಸೇರಿದ್ದಾರೆ. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ' ಎಂದು ಹೇಳಿದರು. 
 
'ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪೊಲೀಸ್ ಭದ್ರತೆ ಇರುತ್ತದೆ. ‌ಮಕ್ಕಳನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದ ಬಳಿ ಅನ್ಯರಿಗೆ ಪ್ರವೇಶ ಇರುವುದಿಲ್ಲ. ಕೋವಿಡ್ ಸೋಂಕು, ಸೋಂಕಿನ ಲಕ್ಷಣಗಳು ಇರುವವರಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರುತ್ತದೆ' ಎಂದು ಸಚಿವರು ತಿಳಿಸಿದರು. 
 
'ಕರ್ನಾಟಕ ಶಿಕ್ಷಣ ಕಾಯ್ದೆ, ರಾಜ್ಯ ಸರ್ಕಾರದ ಆದೇಶಗಳು, ಸುತ್ತೋಲೆಗಳು ಹಾಗೂ ತರಗತಿಗಳಲ್ಲಿ ಸಮವಸ್ತ್ರ ನಿಯಮ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಪ್ರಕಾರ, ಸಮವಸ್ತ್ರದಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗಬೇಕು. 
ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು ಸಮವಸ್ತ್ರ ಇಲ್ಲದೇ ಸಾಮಾನ್ಯ ಧಿರಿಸಿನಲ್ಲಿ ಪರೀಕ್ಷೆ  ಬರೆಯಲು ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಸಚಿವ ನಾಗೇಶ್ ತಿಳಿಸಿದರು. 
 
'ತರಗತಿಗಳಲ್ಲಿ ಕೇಸರಿ ಶಾಲು, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರ ಅಥವಾ ಉಡುಪು, ಹೊದಿಕೆ ಹಾಕಿಕೊಳ್ಳಲು, ಪ್ರದರ್ಶನ ಮಾಡಲು ಅನುಮತಿ ಇರುವುದಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಮಕ್ಕಳು ಪಾಲಿಸಬೇಕು' ಎಂದು ಸಚಿವ ನಾಗೇಶ್ ತಿಳಿಸಿದರು. 
 
'ಶಿಕ್ಷಣ ಇಲಾಖೆ ಆದೇಶಗಳು ಹಾಗೂ ನ್ಯಾಯಾಲಯದ ತೀರ್ಪನ್ನು ಮಕ್ಕಳು ಪಾಲಿಸುವ ಮೂಲಕ ಪರೀಕ್ಷೆ ಬರೆದು ತಮ್ಮ ಶೈಕ್ಷಣಿಕ ಭವಿಷ್ಯದ ಏಳಿಗೆಯ ಕಡೆ ಗಮನ ಹರಿಸುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವಿದೆ' ಎಂದು ಸಚಿವರು ನುಡಿದರು.
 
 
ಹಿಜಾಬ್ ವಿಚಾರವಾಗಿ ಕೆಲವು ಶಿಕ್ಷಕರಿಗೆ ಬೆದರಿಕೆ ಕರೆಗಳು ಬಂದಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ, 'ಶಿಕ್ಷಕರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ನಮಗೆ ನೇರವಾಗಿ ಮಾಹಿತಿ ಬಂದಿಲ್ಲ. ಆದರೆ, ಯಾವುದೇ ಬೆದರಿಕೆ ಕರೆ, ಸಂದೇಶಗಳು ಬಂದರೆ ಶಿಕ್ಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಗೃಹ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತದೆ' ಎಂದು ಸಚಿವ ನಾಗೇಶ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ಸೀರೆಗಳು ಬೆಂಗಳೂರಿನ ಎಚ್ ಎಸ್ ಆರ್ ಬಡಾವಣೆಯಲ್ಲಿ ಶುರು