Publish Date: Sat, 11 May 2024 (16:14 IST)
Updated Date: Sat, 11 May 2024 (16:18 IST)
ಮೈಸೂರು: ಅಗಲಿದ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಅಪರೂಪದ ಘಟನೆಗಳಿಗೆ ಸಾಕ್ಷಿಯಾಯಿತು. ಸಿಎಂ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಕಾಲಿಗೆ ಬಿದ್ದು ನಮಸ್ಕರಿಸಿದರು.
ಶ್ರೀನಿವಾಸ್ ಪ್ರಸಾದ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಟ್ಟಿಗೇ ವೇದಿಕೆ ಹಂಚಿಕೊಂಡರು. ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಕ್ಕಪಕ್ಕವೇ ಕೂತಿದ್ದರು. ಜೊತೆಗೆ ಸಂಸದ ಪ್ರತಾಪ್ ಸಿಂಹ ಕೂಡಾ ವೇದಿಕೆಯಲ್ಲಿದ್ದರು.
ಸಿಎಂ ಸಿದ್ದರಾಮಯ್ಯ ಕೊಂಚ ತಡವಾಗಿ ವೇದಿಕೆ ಆಗಮಿಸಿದರು. ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೇ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರು ಎದ್ದು ನಿಂತು ನಮಸ್ಕಾರ ಮಾಡಿದರು. ಆದರೆ ಮೈಸೂರು ಸಂಸದ ಪ್ರತಾಪ್ ಸಿಂಹ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ವೇಳೆ ಪ್ರತಾಪ್ ಸಿಂಹರನ್ನು ಎತ್ತಿ ಹಿಡಿದ ಸಿಎಂ ಆತ್ಮೀಯವಾಗಿ ಮಾತನಾಡಿಸಿದರು.
ರಾಜಕೀಯ ವಿಚಾರಕ್ಕೆ ಬಂದರೆ ಇಬ್ಬರೂ ಪರಸ್ಪರ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಲೋಕಸಭೆ ಚುನಾವಣೆಗೆ ಮುನ್ನ ಪ್ರತಾಪ್ ಸಿಂಹರನ್ನು ಸೋಲಿಸಬೇಕು ಎಂದು ಸಿದ್ದರಾಮಯ್ಯ ಕರೆ ಕೊಟ್ಟಿದ್ದರು. ಆದರೆ ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಯಿತು.