Publish Date: Sat, 11 May 2024 (14:11 IST)
Updated Date: Sat, 11 May 2024 (14:13 IST)
ಮೈಸೂರು: ಚುನಾವಣೆ ವೇಳೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಇಂದು ಒಂದೇ ವೇದಿಕೆಯಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಆಗಮಿಸಿದ್ದರು. ಇಬ್ಬರೂ ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದು ಎಲ್ಲರ ಗಮನ ಸೆಳೆಯಿತು. ಚುನಾವಣೆಯಲ್ಲಿ ನಾಯಕರ ನಡುವೆ ಏನೇ ವಾಗ್ವಾದ ನಡೆದರೂ ವೈಯಕ್ತಿಕವಾಗಿ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಈ ಮೊದಲು ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾಗ ಬಿಎಸ್ ವೈ ಸೇರಿದಂತೆ ಬಿಜೆಪಿ ನಾಯಕರು ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು. ಇಂದು ತಮ್ಮ ರಾಜಕೀಯ ವೈರುಧ್ಯ ಮರೆತು ಅಗಲಿದ ಸಂಸದ ಶ್ರೀನಿವಾಸ್ ಪ್ರಸಾದ್ ಗಾಗಿ ಇಬ್ಬರೂ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಭೌದ್ಧ ಧರ್ಮಗುರು ಬಂತೇಜಿ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್, ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.