ಬೆಂಗಳೂರು: ಕಾನೂನು ಕೈಗೆ ತೆಗೆದುಕೊಳ್ಳುವುದು ನಿಮ್ಮಂಥವರಿಗೆ ಶೋಭೆ ತರುವುದಿಲ್ಲ ಎಂಬುದನ್ನು ಸಿದ್ದರಾಮಯ್ಯನವರಿಗೆ ಹೇಳಬಯಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು, ಮುನಿರತ್ನ ಅವರ ಮೇಲೆ ಆರೋಪಗಳಿದ್ದು ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಕೋರ್ಟ್ ಜಾಮೀನು ಕೊಟ್ಟಿದೆ. ಕೋರ್ಟ್ ಅವರ ಕ್ಷೇತ್ರಕ್ಕೆ ಹೋಗಬಾರದೆಂದು ಹೇಳಿದೆಯೇ ಎಂದು ಪ್ರಶ್ನಿಸಿದರು.
ಮುನಿರತ್ನ ಅವರು ತಮ್ಮ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಕ್ರಮ ಮಾಡುತ್ತಿದ್ದರು. ಅಲ್ಲಿ ಅವರಿಗೆ ಮೊಟ್ಟೆ ಎಸೆದಿದ್ದಾರೆ ಎಂದ ಅವರು, ಅದು ಮುನಿರತ್ನ ಇರಲಿ, ಈಗ ಚರ್ಚೆ ನಡೆಯುತ್ತಿರುವ ಸಿ.ಟಿ.ರವಿಯವರ ಪ್ರಕರಣವೇ ಇರಲಿ. ಕೋರ್ಟ್ ನಿರ್ಧಾರ ಮಾಡಲಿ ಎಂದು ತಿಳಿಸಿದರು.
ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಪೂರ್ವಜರಾದ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಥರದ ಕೆಲ ವ್ಯಕ್ತಿಗಳಂತೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ನೀವು ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡುವುದು, ಮೊಟ್ಟೆ ಎಸೆಯುವುದು ಖಂಡನೀಯ. ಇವತ್ತಿಗೂ ಸಿ.ಟಿ.ರವಿಯವರ ದೂರಿನ ಮೇಲೆ ಎಫ್‍ಐಆರ್ ದಾಖಲಿಸಿಲ್ಲ; ಸ್ವಯಂಪ್ರೇರಿತ ಆಗಿದೆ ಎನ್ನುತ್ತಾರೆ ಎಂದು ತಿಳಿಸಿದರು.
ಯಾಕೆ ದೂರು ದಾಖಲಿಸಿಲ್ಲ ಎಂದು ವಕೀಲರು ಕೇಳಿದರೆ ಕಮೀಷನರ್, ಸಿಐಡಿಗೆ ವರ್ಗಾವಣೆ ಆಗಿದೆ ಎನ್ನುತ್ತಾರೆ. ಆದರೆ, ನೀವು ಎಫ್‍ಐಆರ್ ಮಾಡಿ ಪ್ರಕರಣ ವರ್ಗಾಯಿಸಬೇಕು. ಮಂಜುನಾಥ ನಾಯಕ್ ಎಂಬುವರನ್ನು ಅಮಾನತು ಮಾಡಿದ್ದಾರೆ. ಅಲ್ಲಿ ಕಮೀಷನರ್ ಇದ್ದರಲ್ಲವೇ ಎಂದು ಪ್ರಶ್ನಿಸಿದರು. ಅಲ್ಲಿ ಎಸ್ಪಿ ಇದ್ದರಲ್ಲವೇ? ಹಾಗಿದ್ದರೆ ಅವರೇನು ಮಾಡುತ್ತಿದ್ದರು ಎಂದು ಕೇಳಿದರು.
ಭಯ ಹುಟ್ಟಿಸುವ ಕೆಲಸ ನಡೆದಂತಿದೆ. ಆರ್.ಅಶೋಕ್, ವಿಜಯೇಂದ್ರರು, ವಕೀಲರು ಸಿ.ಟಿ.ರವಿಯವರನ್ನು ಮಾತನಾಡಿಸಬಾರದೆಂದು ಹೊರಗಡೆ ಕೂರಿಸಿದ್ದಾರೆ. ಕಾಂಗ್ರೆಸ್ಸಿನವರು ಯಾವ ಕಾಲದಲ್ಲಿದ್ದಾರೆ? ಕಮೀಷನರ್ ಬಂದು ಮಾತನಾಡಿಲ್ಲ ಎಂದು ಟೀಕಿಸಿದರು.
ಈ ರೀತಿಯ ನಡವಳಿಕೆಯನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಲು ಸಾಧ್ಯವಿಲ್ಲ; ಪ್ರಜಾಪ್ರಭುತ್ವದಲ್ಲಿ ಕಾನೂನಿನ ಪ್ರಕಾರ, ಸಂವಿಧಾನದನ್ವಯ ನಡೆದುಕೊಳ್ಳಬೇಕು. ನೆಹರೂ ಕಾಲದಿಂದ ಈಗಿನವರೆಗೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿದ್ದಾರೆ ಎಂದು ತಿಳಿಸಿದರು.