ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲೈಂಗಿಕ ಕಿರುಕುಳ ಪ್ರಕರಣ ಆರೋಪಿ, ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ, ಕಲ್ಲಿನಿಂದ ದಾಳಿ ಮಾಡಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಘಟನೆ ನಡದಿದೆ. ಕಾಲ್ನಡಿಗೆಯಲ್ಲಿ ಬೆಂಬಲಿಗರ ಜೊತೆ ಸಾಗುತ್ತಿದ್ದ ಮುನಿರತ್ನ ಮೇಲೆ ಯಾರೋ ಮೊಟ್ಟೆ ಎಸೆದಿದ್ದಾರೆ. ಇದು ನೇರವಾಗಿ ಅವರ ತಲೆಗೆ ತಗುಲಿದೆ. ಇದೂ ಸಾಲದೆಂಬಂತೆ ಅವರ ಕಾರಿನ ಮೆಲೆ ಕಲ್ಲೆಸೆದು ದಾಳಿ ಮಾಡಲಾಗಿದೆ.
ತಕ್ಷಣವೇ ಮುನಿರತ್ನ ಸ್ಥಳದಿಂದ ತೆರಳಿದ್ದು, ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯೇ ನಡೆದಿದೆ. ಇದು ಕಾಂಗ್ರೆಸ್ ಕಾರ್ಯಕರ್ತರದ್ದೇ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಆದರೆ ಇದು ಬಿಜೆಪಿಯವರೇ ಕೃತ್ಯ ನಡೆಸಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇತ್ತೀಚೆಗಷ್ಟೇ ಮುನಿರತ್ನ ಮೇಲೆ ರೇಪ್, ಲೈಂಗಿಕ ಕಿರುಕಳ ಆರೋಪ ಬಂದಿತ್ತು. ಈ ಸಂಬಂಧ ಅವರು ಅರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಈಗ ಅವರ ಮೇಲೆ ದಾಳಿ ನಡೆದಿರುವುದು ಮತ್ತೊಮ್ಮೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.