ಬೆಂಗಳೂರು: ಇಂದು ಬೆಂಗಳೂರಿಗೆ ವಾಪಾಸ್ಸಾಗಲು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಕೊನೆ ಕ್ಷಣದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿ ಅಲ್ಲೇ ಉಳಿದಿದ್ದಾರೆ. ಈ ಮೂಲಕ ವಿದೇಶದಲ್ಲಿದ್ದುಕೊಂಡು ಎಸ್‌ಐಟಿ ತಂಡದ ಜತೆ ಕಣ್ಣಾಮುಚ್ಚಾಲೆಯಾಡುತ್ತಿರುವ ಪ್ರಜ್ವಲ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ತಂಡಕ್ಕೆ ಮೋಸ್ಟ್ ವಾಟೆಂಡ್ ಆಗಿರುವ ಸಂಸದ ಪ್ರಜ್ವಲ್ ಇಂದು ಜರ್ಮನಿಯಿಂದ ವಾಪಾಸ್ಸಾಗುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅದಲ್ಲದೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಆಗಮನಕ್ಕಾಗಿ ಕಾಯುತ್ತಿದ್ದರು.
ಪದೇ ಪದೇ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿರುವುದರಿಂದ ಮುಂದೆ ಏನು ಮಾಡಬೇಕು ಎಂದು ಎಸ್‌ಐಟಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿಕೆಟ್ ಬುಕ್ ಮಾಡಿದರೂ ಪ್ರಯಾಣ ಮಾಡದ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ.
ಸದ್ಯ ಪ್ರಜ್ವಲ್ ಅವರು ತಮ್ಮ ವಕೀಲರ ಜತೆ ಸಂರ್ಪಕದಲ್ಲಿದ್ದು, ಅವರ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಹಾಸನದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಜರ್ಮನ್‌ಗೆ ಹಾರಿದ ಪ್ರಜ್ವಲ್ ವಿರುದ್ಧ ಲುಕ್ ಔಟ್, ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಅದಲ್ಲದೆ ಪ್ರಜ್ವಲ್ ಅವರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರದ ನೆರವು ಕೋರಿದೆ.
ಇನ್ನೂ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್ಡಿ ರೇವಣ್ಣ ಅವರು ಬಂಧನಕ್ಕೊಳಗಾಗಿ ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರ ಬಂದಿದ್ದಾರೆ.