Publish Date: Wed, 21 Jan 2026 (17:29 IST)
Updated Date: Wed, 21 Jan 2026 (17:31 IST)
ಬಳ್ಳಾರಿ: ಬ್ಯಾನರ್ ಗಲಭೆ ಖಂಡಿಸಿ ಜನವರಿ 17 ರಂದು ನಡೆದ ಬೃಹತ್ ಸಮಾವೇಶದಲ್ಲಿ POCSO ಪ್ರಕರಣದ ಸಂತ್ರಸ್ತೆಯ ಹೆಸರು ಹಾಗೂ ವಿವರಣೆಯನ್ನು ಬಹಿರಂಗಪಡಿಸಿದ ವಿಚಾರಕ್ಕೆ ಸಂಬಂಧ ಮಾಜಿ ಸಚಿವ ಶ್ರೀರಾಮುಲು ಅವರು ಕ್ಷಮೆಯಾಚನೆ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು ಗಲಭೆ ಖಂಡಿಸಿ ನಡೆದ ಸಮಾವೇಶದಲ್ಲಿ ಸಾಕಷ್ಟು ವಿಚಾರಗಳನ್ನ ನಮ್ಮ ನಾಯಕರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಾನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ದಾಂಧಲೆ ನಡೆಯುತ್ತಿದೆ ಎಂದು ದೂರಿದರು.
ಇನ್ನೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕೊಲೆ ಪ್ರಕರಣಗಳು, ಗಾಂಜಾ, ಡ್ರಗ್ಸ್, ರೇಪ್ ಕೇಸ್‌ಗಳು ದಾಖಲಾಗುತ್ತಿದೆ. ಈ ವಿಚಾರವನ್ನು ಹೇಳುವಾಗ ಬಾಲಕಿಯ ಹೆಸರನ್ನು ಉಲ್ಲೇಖ ಮಾಡಿದ್ದೇನೆ. ಆ ಬಾಲಕಿಯ ಕುಟುಂಬಕ್ಕೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದರು.
ಇನ್ನೂ ಆ ಸಂತ್ರಸ್ತ ಕುಟುಂಬದ ಜೊತೆ ನಾನು ಇರುತ್ತೇನೆ. ಆ ಕುಟುಂಬದ ಜೊತೆ ಬಿಜೆಪಿಯೂ ಇರುತ್ತೆ. ಅವರಿಗೆ ನ್ಯಾಯ ಒದಗಿಸುತ್ತೇವೆ. ಆ ಕುಟುಂಬ, ಆ ಮಗಳಿಗೆ ನೋವಾಗಿದರೆ ನಾನು ಕ್ಷಮೆ ಕೇಳುತ್ತೇನೆ. ಜಾಗೃತಿ ಮಾಡಿಸುವ ಸಲುವಾಗಿ ನನ್ನ ಮಗಳು ಅಂದುಕೊಂಡು ಪ್ರಸ್ತಾಪ ಮಾಡಿದ್ದೇನೆ ಎಂದ ರಾಮುಲು, ರಾಮಾಯಣದ ಕಥೆ ಉಲ್ಲೇಖಿಸಿ ತನ್ನ ಹೇಳಿಕೆ ಸಮರ್ಥಿಸಿಕೊಂಡರು.