ವಿದ್ಯುತ್ ತಂತಿ ತಗುಲಿ ಕಾಣಿಸಿಕೊಂಡ ಬೆಂಕಿಯ ಕಿನ್ನಾಲಿಗೆ ಸುಮಾರು 20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ನಾಶಗೊಂಡಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳಹುಂಡಿ ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಮತ್ತು ನಾಗ ಎಂಬುವರಿಗೆ ಸೇರಿದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿ 20 ಎಕರೆ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು, ಚೆನ್ನಾಗಿ ಬೆಳೆದು ಕಟಾವಿಗೂ ಬಂದಿತ್ತು. ಅದರಂತೆ ಕಾರ್ಮಿಕರು ಕಬ್ಬು ಕಟಾವು ಮಾಡುವುದರಲ್ಲಿ ನಿರತರಾಗಿದ್ದರು. ಅದೃಷ್ಟವಶಾತ್ ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಸ್ಪರ್ಶವಾಗಿದ್ದು, ಇದೇ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಪಕ್ಕದ ಗದ್ದೆಗಳಿಗೂ ಬೆಂಕಿ ಆವರಿಸಿ ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ. ರೈತ ಸುಬ್ರಮಣ್ಯ ಎಂಬುವರಿಗೆ ಸೇರಿದ 7ಎಕರೆ ಮತ್ತು ರೈತ ನಾಗ ಎಂಬುವರ 7ಎಕರೆ ಕಬ್ಬು ಬೆಳೆಗೆ ಬೆಂಕಿ ತಗುಲಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ತಲುಪಿಸಲಾಗಿದೆ. ಕೂಡಲೇ ಎರಡು ಅಗ್ನಿಶಾಮಕ ವಾಹದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ಬಂದಿಸಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ಹರಡಿದ ಹಿನ್ನೆಲೆ ಬೆಂಕಿ ಆರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ವಿಫಲರಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಕ್ಷಣ ಮಾತ್ರದಲ್ಲಿ ಕಬ್ಬು ಬೆಳೆ ಬೂದಿಯಾಗಿದೆ. ಸ್ಥಳದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.