Select Your Language

Notifications

webdunia
webdunia
webdunia
webdunia

ಸುರಂಗ ರಸ್ತೆ ಭಂಡತನದ ನಿರ್ಧಾರ: ಪಿ.ಸಿ.ಮೋಹನ್

PC Mohan

Krishnaveni K

ಬೆಂಗಳೂರು , ಗುರುವಾರ, 13 ನವೆಂಬರ್ 2025 (15:49 IST)
ಬೆಂಗಳೂರು: ರಾಜ್ಯ ಸರಕಾರದ ಬಳಿ ಬೆಂಗಳೂರಿನ ಗುಂಡಿಗಳನ್ನು ಮುಚ್ಚಲು ಹಣ ಇಲ್ಲದಿದ್ದರೂ ಎರಡು ಸುರಂಗ ರಸ್ತೆ ಮಾಡುವುದಾಗಿ ಭಂಡತನದಿಂದ ಮುಂದೆ ಹೋಗುತ್ತಿದೆ. ಇದು ದುರದೃಷ್ಟದ ವಿಚಾರ ಎಂದು ಸಂಸದ ಪಿ.ಸಿ. ಮೋಹನ್ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಈ ಸಂಬಂಧ ಟೆಂಡರ್ ಕರೆದು ತಾಂತ್ರಿಕ ಬಿಡ್ ತೆರೆದಿದ್ದಾರೆ. ಎಸ್ಟೀಮ್ ಮಾಲ್‍ನಿಂದ ಮಡಿವಾಳದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ವರೆಗೆ 18 ಕಿಮೀನ ಒಂದು ಟನೆಲ್ ರಸ್ತೆ ಮಾಡುತ್ತಿದ್ದಾರೆ. ಒಳಕ್ಕೆ ಹೋಗುವ (ಎಂಟ್ರಿ) ಮತ್ತು ಹೊರಬರುವ (ಎಕ್ಸಿಟ್) ಪಾಯಿಂಟ್ 15 ಕಿಮೀ ಇದ್ದು, ಒಟ್ಟು 33 ಕಿಮೀನ ಟನೆಲ್ ರಸ್ತೆ ಇದಾಗಿದೆ. ಭೂಮಿಯಲ್ಲಿ 30ರಿಂದ 40 ಮೀಟರ್ ಅಂದರೆ, 130ರಿಂದ 140 ಅಡಿ ಕೆಳಗೆ ಇರುವಂಥ ಸುರಂಗ ಮಾರ್ಗ ಇದಾಗಿದೆ ಎಂದರು.

ಹೆಬ್ಬಾಳದಿಂದ ಬಂದು ಮೇಖ್ರಿ ವೃತ್ತದಲ್ಲಿ ಒಂದು ಎಕ್ಸಿಟ್, ರೇಸ್‍ಕೋರ್ಸ್, ಲಾಲ್‍ಬಾಗ್ ಒಂದೊಂದು ಎಕ್ಸಿಟ್, ಅದಾದ ಬಳಿಕ ಕೊನೆಯಲ್ಲಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಒಂದು ಎಕ್ಸಿಟ್ ಇರುತ್ತದೆ. ಸಂಚಾರದ ದಟ್ಟಣೆ ಅಧ್ಯಯನ ನಡೆದಿಲ್ಲ; ಖಾಲಿ ಜಾಗ ಇದ್ದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನೀಡಿದ್ದಾಗಿ ಟೀಕಿಸಿದರು. ವೈಜ್ಞಾನಿಕ ಅಧ್ಯಯನ ಇಲ್ಲದೇ ಸಮರ್ಪಕ ಚಿಂತನೆ ಒಳಗೊಳ್ಳದೇ ಇದನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರಕಾರವು ಬೆಂಗಳೂರಿನಲ್ಲಿ ಎರಡು ಟನೆಲ್ ಯೋಜನೆ ಜಾರಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಯನ್ನು ಬೆಂಗಳೂರಿಗೆ ತರಲು ಉಪ ಮುಖ್ಯಮಂತ್ರಿ ಮತ್ತು ನಗರ ಉಸ್ತುವಾರಿ ಸಚಿವರು ಕಾತರದಿಂದ ಇದ್ದಾರೆ ಎಂದು ನುಡಿದರು.

2024ರ ಜುಲೈನಲ್ಲೇ ನಾನು ಇದರ ಸಾಧಕ- ಬಾಧಕ, ಡಿಪಿಆರ್‍ನಲ್ಲಿನ ನ್ಯೂನತೆಗಳ ಕುರಿತು ಸರಕಾರದ ಗಮನಕ್ಕೆ ತಂದಿದ್ದೆ. 14 ಕೋಟಿ ಖರ್ಚಿನಲ್ಲಿ ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿ ಆಲ್ಟಿನಾಕ್ ಕನ್ಸಲ್ಟೆಂಟ್ ಮತ್ತು ರಾಡಿಕ್ ಕನ್ಸಲ್ಟೆಂಟ್ ಸಂಸ್ಥೆಗೆ ಡಿಪಿಆರ್ ಮತ್ತು ಸಾಧ್ಯಾಸಾಧ್ಯತಾ ವರದಿ ನೀಡಲು ಸೂಚಿಸಿದ್ದಾಗಲೇ ಇದನ್ನು ನಾನು ವಿರೋಧಿಸಿದ್ದೆ ಎಂದು ತಿಳಿಸಿದರು. ಇಂಥ ಪ್ರಮುಖ ಟನೆಲ್ ಯೋಜನೆಯ ಡಿಪಿಆರ್‍ಗೆ ಕನಿಷ್ಠ ಒಂದೂವರೆಯಿಂದ 2 ವರ್ಷ ಬೇಕು ಎಂದರು.
 
ತಾಂತ್ರಿಕ ಅಧ್ಯಯನ ನಡೆಸಲು ಸಮಿತಿ ರಚಿಸಿಲ್ಲ; ಸರಕಾರವು ಅವರದೇ ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ), ಚೀಫ್ ಎಂಜಿನಿಯರ್, ದೆಹಲಿಯ ಒಂದು ಖಾಸಗಿ ಕನ್ಸಲ್ಟೆಂಟ್ ಬಳಿ ವರದಿ ಪಡೆದಿದ್ದಾರೆ. ಇವರು ಮೂವರೂ ಡಿ.ಕೆ.ಶಿವಕುಮಾರ್ ಅವರು ಹೇಳಿದ ತಾಳಕ್ಕೇ ಕುಣಿಯುತ್ತಾರೆಯೇ ಹೊರತು, ಅವರು ನೈಜ ಸಮಸ್ಯೆಯನ್ನು ಹೇಳಲು ಹೋಗುವುದಿಲ್ಲ ಎಂದು ವಿಶ್ಲೇಷಿಸಿದರು.
ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಐಐಎಸ್‍ಸಿ, ಐಐಟಿಗಳಿಂದ ತಾಂತ್ರಿಕ ವರದಿ ಪಡೆಯಬೇಕಿತ್ತು ಎಂದು ಪಿ.ಸಿ.ಮೋಹನ್ ಅವರು ತಿಳಿಸಿದರು. ಇಂಥ ಸಂಸ್ಥೆಗಳು ಸರಕಾರದ ಮುಲಾಜಿಗೆ ಕೆಲಸ ಮಾಡುವುದಿಲ್ಲ ಎಂಬುದು ನನ್ನ ಅನುಭವ ಎಂದರು. ವೈಜ್ಞಾನಿಕವಾಗಿ ತಾಂತ್ರಿಕ ವರದಿ ಕೊಟ್ಟಿಲ್ಲ ಎಂದು ಟೀಕಿಸಿದರು.
 
ವಿಸ್ತತ ಯೋಜನಾ ವರದಿಯಲ್ಲಿ ಕೆ.ಆರ್.ಪುರ, ಸಿಲ್ಕ್ ಬೋರ್ಡ್, ಹೆಬ್ಬಾಳ, ಗುರುಗುಂಟೆ ಪಾಳ್ಯಯಂಥ ಪ್ರಮುಖ ಸಂಚಾರ ಪ್ರದೇಶಗಳನ್ನು ಪರಿಗಣಿಸಿಲ್ಲ; ಕೆ.ಆರ್.ಪುರದಿಂದ ನಾಯಂಡಹಳ್ಳಿಗೆ ಇನ್ನೊಂದು ಟನೆಲ್‍ಗೆ ಡಿಪಿಆರ್ ತಯಾರಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ತುಮಕೂರು ರಸ್ತೆ, ಕನಕಪುರ ರಸ್ತೆ, ಒ.ಆರ್.ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಇವೆಲ್ಲವೂ ನೈಸ್ ರಸ್ತೆಯ ಮೂಲಕ ಸಂಪರ್ಕ ಹೊಂದಿವೆ. ಇನ್ನೊಂದು ಟನೆಲ್ ಬೇಕೇ ಎಂದು ಸರಕಾರವನ್ನು ಪ್ರಶ್ನಿಸಿದರು.
 
ಕೆ.ಆರ್.ಪುರದಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೆ ಒಂದು ಮೇಲ್ಮಟ್ಟದ (ಎಲಿವೇಟೆಡ್) ರಸ್ತೆ ಮಾಡುತ್ತಿದ್ದಾರೆ. ಮೇಲ್ಮಟ್ಟದ ರಸ್ತೆ ಇದ್ದಾಗ ಸುರಂಗದ ಅವಶ್ಯಕತೆ ಇರುವುದಿಲ್ಲ; ಸರಕಾರವು ಜನÀರ ಹಣ ಲೂಟಿ ಮಾಡಲು ಸುರಂಗ ರಸ್ತೆ ರಚಿಸಲು ಮುಂದಾಗಿದೆ. ಜನರ ಅನುಕೂಲಕ್ಕೆ ಇದನ್ನು ಮಾಡುತ್ತಿಲ್ಲ ಎಂಬುದು ಕಣ್ಣಿಗೆ ಎದ್ದು ಕಾಣುತ್ತದೆ ಎಂದು ಪಿ.ಸಿ.ಮೋಹನ್ ಅವರು ಆಕ್ಷೇಪಿಸಿದರು.
 
130ರಿಂದ 140 ಅಡಿ ಕೆಳಗೆ ಸುರಂಗ ಮಾರ್ಗ ಕೊರೆದ ಬಳಿಕ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‍ಗೆ ತಲುಪಲು ಒಂದು ಕಿಮೀ ಸುತ್ತು ಹೊಡೆದು ಬರಬೇಕಾಗುತ್ತದೆ. ಒಂದು ಕಿಮೀ ಸುತ್ತು ಹೊಡೆದು ಬರುವಾಗ ಅಲ್ಲಿನ ಕಟ್ಟಡಗಳು, ಗಿಡಮರಗಳು, ಬೋರ್‍ವೆಲ್‍ಗಳ ಬಗ್ಗೆ ಪರಿಸರ ಅಧ್ಯಯನ ಮಾಡಿಲ್ಲ ಎಂದು ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

‌‌ಸುಧಾಮೂರ್ತಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ಡೋಲು ಬಾರಿಸುವವರೇ ಶಾಕ್‌, Viral Video