Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಪೂರ್ಣ

ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಪೂರ್ಣ
ಬೆಂಗಳೂರು , ಶುಕ್ರವಾರ, 30 ಜುಲೈ 2021 (10:05 IST)
ಬಹುದಿನಗಳಿಂದ ನಡೆಯುತ್ತಿದ್ದ ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-2ರ ರೀಚ್-2 ವಿಸ್ತರಿಸಿದ (ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ) ನೂತನ ಸಂಚಾರ ಕೆಂಗೇರಿ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು,  ಇನ್ನು ಕೆಲವೇ ದಿನಗಳಲ್ಲಿ ವಾಣಿಜ್ಯ ಸಂಚಾರ ಸಾಧ್ಯತೆ ಇದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಹುತೇಕ ಕಾಮಗಾರಿ ಪೂರ್ಣ ಹಿನ್ನೆಲೆಯಲ್ಲಿಆಗಸ್ಟ್ ,11 ಮತ್ತು 12 ರಂದು ಅಂತಿಮ ಸುರಕ್ಷತಾ ಪರೀಕ್ಷೆ ನಡೆಯಲಿದ್ದು ರೈಲ್ವೇ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಯಲಿದೆ. ಈ ವೇಳೆ ಪರೀಕ್ಷೆಯಲ್ಲಿ ನಿರ್ಮಾಣ ಕಾರ್ಯವು ಸುರಕ್ಷಿತ ಎಂದು ಎನಿಸಿದರೆ ವಾಣಿಜ್ಯ ಸಂಚಾರಕ್ಕೆ ಆಯುಕ್ತರಿಂದ ಗ್ರೀನ್ ಸಿಗ್ನಲ್ ದೊರೆಯುತ್ತದೆ. ಆ ನಂತರ ಆಯುಕ್ತರು ಸುರಕ್ಷತಾ ಪ್ರಮಾಣ ಪತ್ರ ನೀಡಿ ನಾಗರಿಕರ ಅನುಕೂಲಕ್ಕೆ ತಕ್ಕಂತೆ ವಾಣಿಜ್ಯ ಸಂಚಾರಕ್ಕೆ ಆಯಯಕ್ತರು ಒಪ್ಪಿಗೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಯಂಡನಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಾಣವಾಗಿರೋ ನೇರಳೆ ಮಾರ್ಗದ ಒಟ್ಟು ಉದ್ದ ಒಟ್ಟು 7.53 ಕಿ.ಮೀ ಇದೆ. ಈ ವಿಸ್ತರಣಾ ಕಾಮಗಾರಿಗೆ 1,560 ಕೋಟಿ ರೂ. ವೆಚ್ಚ ತಗುಲಿದ್ದು. ಭೂ-ಸ್ವಾಧೀನಕ್ಕೆ 360 ಕೋಟಿ ರೂ. ವೆಚ್ಚವಾಗಿದೆ ಎಂದು ಮೇ ತಿಂಗಳಲ್ಲಿ ಈ ಕಾಮಗಾರಿಯ ಪರಿಶೀಲನೆ ನಡೆಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದರು. ಈ ಕಾಮಗಾರಿ ಸಂಪೂರ್ಣವಾಗಿರುವ ಕಾರಣ ಪೂರ್ವ-ಪಶ್ಚಿಮ ಕಾರಿಡಾರ್ ಮಾರ್ಗದ ಉದ್ದ 18.1 ಕಿ.ಮೀ. ಗೆ ಹೆಚ್ಚಳವಾಗಿದೆ. ಇದರಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್-ಟರ್ಮಿನಲ್ ಹಾಗೂ ಕೆಂಗೇರಿ - ಒಟ್ಟು 6 ನಿಲ್ದಾಣಗಳಿವೆ ಎಂದು ಮಾಹಿತಿ ನೀಡಲಾಗಿದೆ.
ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ, ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣ ಹೊರತು ಪಡಿಸಿ ಉಳಿದ ಎಲ್ಲ ನಿಲ್ದಾಣಗಳನ್ನು ರಸ್ತೆ ದಾಟಲು ಪಾದಚಾರಿಗಳು ಬಳಸಬಹುದಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದ್ದು, ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ 60 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಈ ವಿಸ್ತರಣೆಯ ಕಾರ್ಯಾಚರಣೆಯಿಂದ ಪ್ರತಿದಿನ ಸರಾಸರಿ 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಜೂನ್ ಅಂತ್ಯದ ವೇಳೆಗೆ  ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ತಡವಾದ ಹಿನ್ನಲೆ ವಾಣಿಜ್ಯ ಸಂಚಾರ ವಿಳಂಬವಾಗಿತ್ತು. ಸದ್ಯ ಆಗಸ್ಟ್ 11 ಮತ್ತು 12 ಕ್ಕೆ ಸುರಕ್ಷತಾ ಪ್ರಮಾಣ ಪತ್ರ ನೀಡುವ ಕಾರಣ ಆಗಸ್ಟ್ 20 ರೊಳಗೆ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿರುವ ನಿರೀಕ್ಷೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ದುರ್ಗಮ ಪ್ರದೇಶಗಳಲ್ಲೂ ಏರ್ಪೋರ್ಟ್: ಮಸೂದೆ ಪಾಸ್!