ಕೋವಿಡ್ ಸೋಂಕಿನ ನಡುವೆ ಹೊಸ ರೂಪಾಂತರಿ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದರೂ, ದೇಶದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಡಿಜಿಟಲ್ ಕಮ್ಯುನಿಟಿಯ ಲೋಕಲ್ ಸರ್ಕಲ್ಸ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬ ವ್ಯಕ್ತಿ ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಏಪ್ರಿಲ್ ನಲ್ಲಿ 364 ಜಿಲ್ಲೆಗಳಲ್ಲಿ 25ಸಾವಿರ ಜನರನ್ನೊಳಗೊಂಡ ಈ ಸಮೀಕ್ಷೆಯಲ್ಲಿ ಶೇ. 29ರಷ್ಟು ಜನರು ಮಾಸ್ಕ್ ಧರಿಸುತ್ತಿದ್ದರು. ಆದರೆ ಈ ಸಂಖ್ಯೆ ಸೆಪ್ಟೆಂಬರ್ ನಲ್ಲಿ ಶೇ. 12ಕ್ಕೆ ಕುಸಿದಿತ್ತು. ನವೆಂಬರ್ ನಲ್ಲಿ ಶೇ.2ಕ್ಕೆ ಕುಸಿದಿರುವುದು ತಜ್ಞರಲ್ಲಿ ಆತಂಕ ಹೆಚ್ಚಿಸಿದೆ.
ಕೋವಿಡ್ ಹರಡುವಿಕೆ ನಿಯಂತ್ರಿಸಲು ಜನರು ಬಟ್ಟೆ ಮಾಸ್ಕ್ ಗಳನ್ನು ಬಳಸುತ್ತಿದ್ದಾರೆ. ಈ ಮಾಸ್ಕ್ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಅಷ್ಟೇ ಅಲ್ಲ.. ಯಾವುದೇ ಕೋಣೆ ಅಥವಾ ಒಳಾಂಗಣ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಮಾಸ್ಕ್ ಧರಿಸದೇ ಇದ್ದರೆ ಕೇವಲ 10 ನಿಮಿಷದಲ್ಲಿ ಸೋಂಕಿತ ವ್ಯಕ್ತಿ ವೈರಸ್ ಅನ್ನು ಮತ್ತೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆ ಇದೆ. ಅದೇ ವೇಳೆ ಎನ್-95 ಮಾಸ್ಕ್ ಧರಿಸಿದ್ದರೆ ಸೋಂಕು ಹರಡೋಕೆ 600 ಗಂಟೆಗಳ ಸಮಯ ಇರಲಿದೆ ಎಂದು ಲೋಕಲ್ ಸರ್ಕಲ್ಸ್ ನ ಮುಖ್ಯಸ್ಥ ಸಚಿನ್ ತಪಾರಿಯಾ ತಿಳಿಸಿದ್ದಾರೆ.
ಭಾರತ ಸೇರಿದಂತೆ ವಿಶ್ವದ 40 ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ.