Select Your Language

Notifications

webdunia
webdunia
webdunia
webdunia

ಜೂನ್ 16 ರಂದು ಎಸ್.ಡಿ.ಎ. ಪರೀಕ್ಷೆ: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ

ಜೂನ್ 16 ರಂದು ಎಸ್.ಡಿ.ಎ. ಪರೀಕ್ಷೆ: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ
ಕಲಬುರಗಿ , ಶನಿವಾರ, 15 ಜೂನ್ 2019 (17:34 IST)
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಸೇವಾ ಆಯೋಗದಿಂದ ಜೂನ್ 16 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿ ಸುಗಮವಾಗಿ ಪರೀಕ್ಷೆ ಜರುಗುವಂತೆ ನೋಡಿಕೊಳ್ಳಬೇಕೆಂದು ಕಲಬುರಗಿ ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಬಿ. ಶರಣಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತ,  ಜಿಲ್ಲೆಯಲ್ಲಿ ಜೂನ್ 16 ರಂದು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕಲಬುರಗಿ ನಗರದ 69 ಹಾಗೂ ಜೇವರ್ಗಿ 8 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 77 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ 30,228 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಎಸ್.ಡಿ.ಎ ಹುದ್ದೆಗಳಿಗೆ ಅರ್ಜಿ ಸಲ್ಲಿರುವ ಅಭ್ಯರ್ಥಿಗಳು ಪತ್ರಿಕೆ-3 ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆ-2 ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲೀಷ ಪರೀಕ್ಷೆಗಳು ಬರೆಯಲಿದ್ದಾರೆ. ಮಧ್ಯಾಹ್ನದ ಪತ್ರಿಕೆ ಬರೆಯುವ ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಕನ್ನಡ ಅಥವಾ ಆಂಗ್ಲ ಭಾಷೆಯನ್ನು ಕಡ್ಡಾಯವಾಗಿ ಓ.ಎಂ.ಆರ್. ಶೀಟ್‍ನಲ್ಲಿ ನಮೂದಿಸಬೇಕೆಂದರು.
ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು 3-4 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ 23 ಜನ ವೀಕ್ಷಕರು ಹಾಗೂ 23 ಜನ ರೂಟ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ವೀಕ್ಷಕರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಗೂ ಮುನ್ನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಆಸನ, ಕುಡಿಯುವ ನೀರು, ಭದ್ರತೆ, ಮಹಿಳೆಯರಾಗಿ ಪ್ರತ್ಯೇಕ ತಪಾಸಣಾ ಕೋಣೆ, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳ ಇರುವಿಕೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಪುರುಷ ಮತ್ತು ಮಹಿಳಾ ಪರೀಕ್ಷಾರ್ಥಿಗಳನ್ನು ಪ್ರತ್ಯೇಕವಾಗಿ ಫ್ರಿಸ್ಕಿಂಗ್ ಮಾಡಲು ಪುರುಷ ಮತ್ತು ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗುವುದು ಎಂದರು. 

ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಹಾಗೂ ಮಾರ್ಗಾಧಿಕಾರಿಗಳು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಯಾವುದೇ ಅಕ್ರಮ  ಚಟುವಟಿಕೆಯಲ್ಲಿ ಭಾಗಿಯಾದ ಮತ್ತು ಅದಕ್ಕೆ ಸಹಕರಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಬಿ. ಶರಣಪ್ಪ ಎಚ್ಚರಿಕೆ ನೀಡಿದರು.

ಗುರುತಿನ ಚೀಟಿ ಕಡ್ಡಾಯ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಂಡ ಪ್ರವೇಶ ಪತ್ರದೊಂದಿಗೆ ಭಾವಚಿತ್ರವಿರುವ  ಮೂಲ ಅಥವಾ ಜೆರಾಕ್ಸ್ ಪ್ರತಿಯ ಆಧಾರ ಕಾರ್ಡ, ಆಧಾರ್ ಸ್ವೀಕೃತಿ ಪ್ರತಿ, ಪ್ಯಾನ್‍ಕಾರ್ಡ್, ಸರ್ಕಾರಿ ನೌಕರರ ಐ.ಡಿ., ಡ್ರೈವಿಂಗ್ ಲೈಸೆನ್ಸ್, ಪಾಸ್‍ಪೋರ್ಟ್, ವೋಟರ ಐಡಿ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಪ್ರವೇಶ ಕೇಂದ್ರಕ್ಕೆ ಬಿಡುವುದಿಲ್ಲ.
ವಿಡಿಯೋಗ್ರಾಫಿ ಕಣ್ಗಾವಲಿನಲ್ಲಿ ಪರೀಕ್ಷೆ:- ಪರೀಕ್ಷಾ ದಿನದಂದು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶದಿಂದ ಹಿಡಿದು ಪತ್ರಿಕೆಯ ಬಂಡಲ್ ತೆರೆಯುವಾಗ ಮತ್ತು ಪರೀಕ್ಷೆಯ ನಂತರ ಪತ್ರಿಕೆಗಳ ಬಂಡಲ್ ಪ್ಯಾಕ್ ಮಾಡುವುದು ಸೇರಿದಂತೆ ಸಂಪೂರ್ಣ ಪರೀಕ್ಷೆ ಪ್ರಕ್ರಿಯೆಯನ್ನು ವಿಡಿಯೋಗ್ರಾಫಿ ಮಾಡಲಾಗುತ್ತಿದೆ.

ಮೊಬೈಲ್ ಸಂಪೂರ್ಣ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಭೆಯಲ್ಲಿ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಕೆ.ಪಿ.ಎಸ್.ಸಿ. ಕಲಬುರಗಿ ಪ್ರಾಂತೀಯ ಕಚೇರಿಯ ಸಹಾಯಕ ಬಸವರಾಜ ಕಟವೆ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಮತ್ತು ರೂಟ್ ಅಧಿಕಾರಿಗಳು ಹಾಜರಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡಿರುವ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?